ಮಂಗಳೂರು: ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಅಲೆದಾಟ ಮಾಡೋದು ಅನಿವಾರ್ಯ. ಆದರೆ ಇನ್ನುಮುಂದೆ ಮಂಗಳೂರಿನಲ್ಲಿ ಜನನ ಪ್ರಮಾಣ ಪತ್ರವು ಸ್ಪೀಡ್ ಪೋಸ್ಟ್ ಮುಖಾಂತರ ಮನೆ ಬಾಗಿಲಿಗೇ ಬರಲಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈ ಸೇವೆ ಆರಂಭವಾಗಲಿದೆ.
ಈ ಸೇವೆಗಾಗಿ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗವು ನಗರದ ಲೇಡಿಗೋಷನ್ ಸರಕಾರಿ ಹೆರಿಗೆ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಜನನವಾದ ಶಿಶುಗಳ ಜನನ ಪ್ರಮಾಣ ಪತ್ರವು ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ಬರುತ್ತದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು ಸುಮಾರು 400-600 ಮಗುಗಳ ಜನನವಾಗುತ್ತದೆ. ಸದ್ಯ ಲೇಡಿಗೋಷನ್ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳ ಜನನ ಪ್ರಮಾಣ ಪತ್ರವನ್ನು ಆಸ್ಪತ್ರೆಯಲ್ಲಿಯೇ ನೀಡಲಾಗುತ್ತದೆ. ಇದನ್ನು ಪಡೆಯಲು ಅರ್ಜಿದಾರರು 2 ಬಾರಿ ಆಸ್ಪತ್ರೆಗೆ ಬರಬೇಕಾಗುತ್ತದೆ. ಆದರೆ ಪ್ರಸ್ತುತ ಭಾರತೀಯ ಅಂಚೆ ಇಲಾಖೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಿಂದ ಜನಸಾಮಾನ್ಯರು ಜನನ ಪ್ರಮಾಣ ಪತ್ರಕ್ಕೆ ಪದೇ ಪದೇ ಆಸ್ಪತ್ರೆಗೆ ಬರುವ ತೊಂದರೆಯಿಂದ ಮುಕ್ತರಾಗಲಿದ್ದಾರೆ.
ಈ ಸೇವೆಯಡಿಯಲ್ಲಿ ಜನನ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿದಾರರಿಗೆ ಎರಡು ಆಯ್ಕೆಗಳಿವೆ. ಒಂದು ಖುದ್ದಾಗಿ ಅವರೇ ಲೇಡಿಗೋಷನ್ ಆಸ್ಪತ್ರೆಗೆ ಬಂದು ಜನನ ಪ್ರಮಾಣ ಪತ್ರ ಪಡೆದುಕೊಳ್ಳುವುದು. ಮತ್ತೊಂದು ಸ್ಪೀಡ್ ಪೋಸ್ಟ್ ಮುಖೇನ ಮನೆಬಾಗಿಲಿಗೆ ಬಂದಿರುವ ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದು. ಅರ್ಜಿಯನ್ನು ಸಲ್ಲಿಸುವ ವಿಧಾನ ಸರಳ ವಿಧಾನದಲ್ಲಿದ್ದು, 100 ರೂ. ಪೋಸ್ಟ್ ಮ್ಯಾನ್ ಗೆ ಸಲ್ಲಿಸಿ ಜನನ ಪ್ರಮಾಣ ಪತ್ರವನ್ನು ಪಡೆಯಲು ಸಮ್ಮತಿಯಿದೆ ಎಂದು ಸಹಿ ಹಾಕಬೇಕು. ಪ್ರಮಾಣ ಪತ್ರ ಮುದ್ರಣಗೊಂಡ ತಕ್ಷಣ ಸ್ಪೀಡ್ ಪೋಸ್ಟ್ ನಲ್ಲಿ ಮನೆಗೆ ಬರಲಿದೆ.
Kshetra Samachara
09/04/2022 08:49 pm