ಕಾರ್ಕಳ: ಗ್ರಾಮೀಣ ಭಾರತದ ಮಟ್ಟಿಗೆ ಇದು ದೇಶದಲ್ಲೇ ಏಕೈಕ ಘನ ತ್ಯಾಜ್ಯ ವಿಲೇವಾರಿ ನಿರ್ವಹಣಾ ಕೇಂದ್ರ. ಪ್ರತಿ ದಿನ 10 ಟನ್ ಸಾಮರ್ಥ್ಯದ ಈ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ (ಮೆಟಿರಿಯಲ್ಸ್ ರಿಕವರಿ ಫೆಸಿಲಿಟಿ ಸೆಂಟರ್- ಎಂಆರ್‌ಎಫ್ ಕೇಂದ್ರ) ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಕಾರ್ಯಾರಂಭ ಮಾಡಲಿದೆ. ಆಧುನಿಕ ರೀತಿಯಲ್ಲಿ, ಪರಿಸರಕ್ಕೆ ಹಾನಿಯಾಗದಂತೆ, ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಈ ಕೇಂದ್ರವನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಏಪ್ರಿಲ್ ಮೂರರಂದು ಈ ಕೇಂದ್ರ ಲೋಕಾರ್ಪಣೆಗೊಳ್ಳಲಿದೆ.
ಇದರ ವಿಶೇಷತೆಗಳು ಏನು ಅನ್ನೋದನ್ನ ನೋಡೋದಾದ್ರೆ ಯೋಜನೆಗೆ ಒಳಪಡುವ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಸಂಗ್ರಹಿಸಲಾಗುವ ಒಣ ತ್ಯಾಜ್ಯವನ್ನು ಒಣ ತ್ಯಾಜ್ಯ ನಿರ್ವಹಣಾ ಕೇಂದ್ರದ ಸ್ವಚ್ಛ ಸಂಕೀರ್ಣಕ್ಕೆ ತರಲಾಗುತ್ತದೆ. ಸ್ವಚ್ಛ ಸಂಕೀರ್ಣದಲ್ಲಿ ತ್ಯಾಜ್ಯವನ್ನು ತೂಕ ಮಾಡಿ ಪ್ಯಾಕ್ ಮಾಡಿ ಇಡಲಾಗುತ್ತದೆ. ಪ್ರತಿವಾರ ಎಂಆರ್‌ಎಫ್ ಕೇಂದ್ರದ ತ್ಯಾಜ್ಯ ಸಂಗ್ರಹಣಾ ವಾಹನವು ಒಣ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಬಾಯ್ಲಿಂಗ್ ಯಂತ್ರದ ಸಹಾಯದಿಂದ ಬಾಯಿಲ್ ಮಾಡಲಾಗುತ್ತದೆ. ಬಾಯಿಲ್ ಮಾಡಿದ ತ್ಯಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕಲಿಂಗ್ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುರ್ನಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ಕೋ ಪ್ರೋಸೆಸಿಂಗ್ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತದೆ
ಎಂಆರ್‌ಎಫ್ ಘಟಕವು 10 ಸಾವಿರ ಚದರ ಅಡಿಯ ಕಟ್ಟಡವನ್ನು ಹೊಂದಿದ್ದು, ದಿನವೊಂದಕ್ಕೆ 10 ಟನ್ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಘಟಕದಲ್ಲಿ ತ್ಯಾಜ್ಯ ಶೇಖರಣೆ, ವಿಂಗಡಣೆ ಹಾಗೂ ಬಾಯ್ಲಿಂಗ್ ಮಾಡುವ ವಿಭಾಗಗಳಿದ್ದು, ಕಚೇರಿ, ಸೆಕ್ಯೂರಿಟಿ ರೂಮ್, ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯ ಸೌಲಭ್ಯವನ್ನು ಹೊಂದಿದೆ.
ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
PublicNext
31/03/2022 06:32 pm