ಪಡುಪಣಂಬೂರು: ಪಡು ಪಣಂಬೂರು ಗ್ರಾಮ ಪಂಚಾಯತ್ ನ 2021-22ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಸಭಾಭವನದಲ್ಲಿ ಅಧ್ಯಕ್ಷೆ ಮಂಜುಳಾ ನೇತೃತ್ವದಲ್ಲಿ ನಡೆಯಿತು.
ಗ್ರಾಮಸಭೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗ್ರಾಮಸಭೆಗೆ ಬಾರದೆ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾದ ಮೂಡಾ ಅಧಿಕಾರಿಯನ್ನು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡರು.
ಗ್ರಾಮಸ್ಥ ಅಶೋಕ್ ಭಟ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮೂಡಾ ದವರ ಕಾನೂನು ಗೊಂದಲಕಾರಿಯಗಿದ್ದು ಗ್ರಾಮಸ್ಥರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸಾರ್ವಜನಿಕರ ಹಿತಾಸಕ್ತಿಗಾಗಿ ಮೂಡಾದ ವಿರುದ್ಧ ನ್ಯಾಯಾಲಕ್ಕೆ ಹೋಗಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಪಂಚಾಯತ್ ಅಧ್ಯಕ್ಷೆ ಮಂಜುಳಾ ಮಾತನಾಡಿ ಮೂಡಾ ಕಚೇರಿಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಪಂಚಾಯಿತಿ ವ್ಯಾಪ್ತಿಯ ಎರಡು ಫೈಲ್‌ಗಳು ಮೂಡಾ ಕಚೇರಿಯಲ್ಲಿ ಈಗಲೂ ಕೊಳೆಯುತ್ತಾ ಬಿದ್ದಿದೆ ಎಂದು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಮೂಡಾ ಆಧಿಕಾರಿ ಸಬೂಬು ಹೇಳಲು ಯತ್ನಿಸಿದಾಗ ಗ್ರಾಮಸ್ಥರು ಒಗ್ಗಟ್ಟಾಗಿ ಸಭೆಯಲ್ಲಿ ಮೂಡಾ ನಿಯಮಗಳ ವಿರುದ್ಧ ನಿರ್ಣಯ ಮಂಡಿಸಲು ಆಗ್ರಹಿಸಿದರು.
ಗ್ರಾ.ಪಂ ವ್ಯಾಪ್ತಿಯ ಪಡುಪಣಂಬೂರು, ಬೆಳ್ಳಾಯರು, ತೋಕೂರು, ಕೇಂದ್ರದ ಆರೋಗ್ಯ ವ್ಯವಸ್ಥೆಯನ್ನು ದೂರದ ಸುರತ್ಕಲ್ ಕಾಟಿಪಳ್ಳ ಕ್ಕೆ ಸ್ಥಳಾಂತರ ಕುರಿತು ಗ್ರಾಮ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿ ಸ್ಥಳಾಂತರಿಸಿದರೆ ಆರೋಗ್ಯ ಕೇಂದ್ರದ ಎದುರು ಆಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಪಂಚಾಯತ್ ಸದಸ್ಯ ವಿನೋದ್ ಸಾಲ್ಯಾನ್ ಎಚ್ಚರಿಕೆ ನೀಡಿದರು.
ಪಂಚಾಯತಿ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಗಳಿಗೆ ಯಾವುದೇ ರಕ್ಷಣೆ ಇಲ್ಲ ಮಕ್ಕಳು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಪಂಚಾಯತ್ ಸದಸ್ಯ ದಿನೇಶ್ ಶೆಟ್ಟಿ ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪಂಚಾಯತ್ ಸದಸ್ಯರಾದ ವಿನೋದ್ ಸಾಲ್ಯಾನ್, ಉಮೇಶ್ ಪೂಜಾರಿ, ಹರಿಪ್ರಸಾದ್ ದನಿಗೂಡಿಸಿ ಕಳೆದ ದಿನದ ಹಿಂದೆ ಟ್ರಾನ್ಸ್ಫಾರ್ಮರ್ ನಿಂದ ಆಕಸ್ಮಿಕ ಕಿಡಿ ಉಂಟಾಗಿ ಪರಿಸರದಲ್ಲಿ ಬೆಂಕಿ ಕೆನ್ನಾಲಿಗೆ ಗಳು ಹರಡಿ ಆತಂಕ ಉಂಟಾಗಿ ಅಗ್ನಿಶಾಮಕದಳ ಬರಬೇಕಾಯಿತು. ಇದು ಪ್ರತಿ ಬಾರಿ ನಡೆದರೂ ಮೆಸ್ಕಾಂ ಇಲಾಖೆ ಮಾತ್ರ ಮೌನವಾಗಿದ್ದು ವಿದ್ಯುತ್ ಪರಿವರ್ತಕ ಗಳಿಗೆ ರಕ್ಷಣೆ ಒದಗಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೆಸ್ಕಾಂ ಇಲಾಖೆ ಹಳೆಯ ವಯರ್ ಗಳನ್ನು ಬದಲಾಯಿಸಲು ಮುಂದಾಗಬೇಕು ಎಂದು ಉಮೇಶ್ ಪೂಜಾರಿ ಹೇಳಿದರು.
ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ತಾಳಿ ಗುರಿ ಬಲಿ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ, ಪಡುಪಣಂಬೂರು ಬಾಂದ ಕೆರೆ ಕಾಮಗಾರಿ ಅವ್ಯವಸ್ಥೆ, ಬೆಳ್ಳಾಯರು ಜಳಕದ ಕೆರೆ ಲೆಕ್ಕ ಪತ್ರ ಒಪ್ಪಿಸುವ ಬಗ್ಗೆ ,ತೋಕೂರು ಶಾಲೆಯ ಒಳಗಡೆ ಇರುವ ಟ್ರಾನ್ಸ್ಫಾರ್ಮರ್ ತೆರವು ಬಗ್ಗೆ ದೂರು ಹಾಗೂ ಆಗ್ರಹ ಕೇಳಿ ಬಂತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶೈಲಾ ನೋಡಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ್ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಸಭೆಗೆ ಪೊಲೀಸ್ ಅಧಿಕಾರಿಗಳು ಸಹಿತ ಅನೇಕರು ಗೈರುಹಾಜರಾಗಿದ್ದರು.
Kshetra Samachara
29/03/2022 05:38 pm