ವರದಿ: ರಹೀಂ ಉಜಿರೆ
ಬ್ರಹ್ಮಾವರ: ಬ್ರಹ್ಮಾವರ- ಪೇತ್ರಿ - ಸೀತಾನದಿ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದ್ದು, ಸಾಕಷ್ಟು ತೊಂದರೆಯಾಗುತ್ತಿದೆ. ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇದ್ದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ವಿದ್ಯಾರ್ಥಿಗಳ ಓಡಾಟ ಬಹಳ ಕಷ್ಟವಾಗಿ ಪರಿಣಮಿಸಿದೆ.
ಮುಖ್ಯವಾಗಿ ಶಾಲೆ ಆರಂಭವಾಗುವಾಗ ಮತ್ತು ಶಾಲೆ ಬಿಡುವಾಗ ಪುಟ್ಟ ಮಕ್ಕಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಮಕ್ಕಳನ್ನು ಕರೆದೊಯ್ಯಲು ಬರುವ ವಾಹನಗಳು, ಇನ್ನೊಂದೆಡೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ದಟ್ಟಣೆ. ಇದರಿಂದಾಗಿ ಈ ಭಾಗದ ಜನ ಹೈರಾಣಾಗಿದ್ದಾರೆ. ಪಂಚಾಯತ್ ಅನುದಾನದಲ್ಲಿ ಈ ರಸ್ತೆ ಅಗಲೀಕರಣ ಸಾಧ್ಯವಿಲ್ಲ. ಹೀಗಾಗಿ ಪಂಚಾಯತ್ ನವರು ಸ್ಥಳೀಯ ಶಾಸಕರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ.
ಇನ್ನು, ಗ್ರಾಮಸ್ಥರು ಕೂಡ ಇಲ್ಲಿ ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೂ ಉಂಟು. ಎರಡು ಶಾಲೆಗಳು ಇರುವ ಈ ರಸ್ತೆಯನ್ನು ಶೀಘ್ರ ಅಗಲೀಕರಣ ಮಾಡಿ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನ ಹರಿಸಲಿ.
Kshetra Samachara
19/02/2022 09:48 am