ಉಳ್ಳಾಲ: ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದ್ದು, ಇಲ್ಲಿನ ಗೆಸ್ಟ್ ಹೌಸ್ ವೊಂದು ಭಾಗಶ: ಕಡಲ ಪಾಲಾಗಿದೆ.
ಕಳೆದ 3 ವರ್ಷಗಳಿಂದ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಬೀಚ್ ರಸ್ತೆಯೇ ಇಲ್ಲದಾಗಿದೆ. ಬಹುತೇಕ ಮನೆ, ಗೆಸ್ಟ್ ಹೌಸ್ ಗಳು ಅಪಾಯದಂಚಿನಲ್ಲಿದ್ದವು. ಈ ಬಾರಿ ಬಟ್ಟಪ್ಪಾಡಿ ಪ್ರದೇಶದ ಕಡಲ್ಕೊರೆತ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮಂತ್ರಿ ಮಹೋದಯರ, ನಾನಾ ಪಕ್ಷ ನಾಯಕರ ದಂಡೇ ಆಗಮಿಸಿತ್ತು.
ಇಲ್ಲಿನ "ವಿಟಮಿನ್ ಸಿ" ಎಂಬ ಅಕ್ರಮ ಗೆಸ್ಟ್ ಹೌಸನ್ನು ಅದರ ಮಾಲಕ ಅಬ್ದುಲ್ಲ ಟಿ. ಎಂಬವರು ಕಲ್ಲು- ಮರಳು ಮೂಟೆಗಳನ್ನು ಹಾಕಿ ರಕ್ಷಿಸಲು ಪ್ರಯತ್ನಿಸಿದ್ದರು. ತೀರ ಪ್ರದೇಶದ ನಿವಾಸಿಗಳ ಮನೆಗಳೇ ಕಡಲಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದು, ಅಕ್ರಮ ಗೆಸ್ಟ್ ಹೌಸ್ ನ ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು.
ಇದರಿಂದ ರೋಸಿ ಹೋಗಿದ್ದ ಗೆಸ್ಟ್ ಹೌಸ್ ಮಾಲಕ ಅಬ್ದುಲ್ಲ, ಕಡಲ್ಕೊರೆತ ವೀಕ್ಷಣೆಗೆ ಬಂದಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರಲ್ಲಿ "ಉಳ್ಳಾಲ ತಾಲೂಕು ಕಚೇರಿಗೆ ಕಂಪ್ಯೂಟರ್ ಹಾಗೂ ಪೀಠೋಪಕರಣ ನೀಡಿದ್ದರೂ ತಮ್ಮ ಗೆಸ್ಟ್ ಹೌಸನ್ನು ರಕ್ಷಿಸಲು ತಹಶೀಲ್ದಾರ್ ಬಿಡುತ್ತಿಲ್ಲ" ಎಂದು ಬಹಿರಂಗವಾಗಿ ಅಲವತ್ತುಕೊಂಡಿದ್ದರು. ಮಾಲಕರು ಶತಾಯಗತಾಯ ಪ್ರಯತ್ನ ಪಟ್ಟರೂ ಗೆಸ್ಟ್ ಹೌಸ್ ರಕ್ಷಣೆ ಕೊನೆಗೂ ಸಾಧ್ಯವಾಗಿಲ್ಲ.
Kshetra Samachara
08/08/2022 04:04 pm