ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಮಸಣದ ಹೂವಾದ ಚೆಂಬುಗುಡ್ಡೆ ವಿದ್ಯುತ್ ಚಿತಾಗಾರ

ಉಳ್ಳಾಲ: ಇನ್ಫೋಸಿಸ್ ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ನಿರ್ಮಿಸಲಾದ ವಿದ್ಯುತ್ ಚಿತಾಗಾರವು ಲೋಕಾರ್ಪಣೆಗೊಂಡು 5 ತಿಂಗಳಾದರೂ ಸಮರ್ಪಕ ನಿರ್ವಹಣೆ ಇಲ್ಲದೆ ಸಾರ್ವಜನಿಕರ ಉಪಯೋಗಕ್ಕೆ ಬಾರದ ಮಸಣದ ಹೂವಾಗಿದೆ.

ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಸುಮಾರು 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ವಿದ್ಯುತ್ ಚಿತಾಗಾರವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ಫೆಬ್ರವರಿ 12 ರಂದು ಸ್ಥಳೀಯ ಶಾಸಕ ಯು.ಟಿ ಖಾದರ್ ಅವರು ಲೋಕಾರ್ಪಣೆಗೊಳಿಸಿದ್ದರು.

ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಆರಂಭದಲ್ಲಿ ಸ್ಥಳೀಯರ ವಿರೋಧ ಕೇಳಿ ಬಂದಿತ್ತು.ರುದ್ರಭೂಮಿಗೆ ಕಾಯ್ದಿರಿಸಲಾದ ಪಕ್ಕದ ಜಮೀನಿನಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದು ಅವರನ್ನು ಮನವೊಲಿಸಿ ಉದ್ದೇಶಿತ ಜಾಗದಲ್ಲೇ 3,000 ಚದರ ಅಡಿ ವಿಸ್ತೀರಣದ ನೂತನ ಕಟ್ಟಡದೊಳಗೆ ಸುಸಜ್ಜಿತ ವಿದ್ಯುತ್ ಚಿತಾಗಾರವನ್ನು ನಿರ್ಮಿಸಲಾಗಿತ್ತು.

ಇನ್ಫೋಸಿಸ್ ಸಂಸ್ಥೆಯು ನಿರ್ಮಿಸಿದ ನೂತನ ವಿದ್ಯುತ್ ಚಿತಾಗಾರವು ಉಳ್ಳಾಲ ನಗರಸಭೆಗೆ ಹಸ್ತಾಂತರಗೊಂಡಿದ್ದು ಚಿತಾಗಾರ ನಿರ್ವಹಿಸಲು ಇನ್ನೂ ಅಪರೇಟರನ್ನು ನೇಮಿಸಿಲ್ಲ.

ರುದ್ರಭೂಮಿಯಲ್ಲಿ ಈಗಿರುವ ಸೌದೆ ಚಿತಾಗಾರದಲ್ಲಿ ಶವ ಸುಡಲು ಸುಮಾರು 3,500 ರೂಪಾಯಿಗಳನ್ನ ತೆರಬೇಕಾಗುತ್ತದೆ.ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರ ನಡೆಸಲು ಹೆಚ್ಚೆಂದರೆ ಒಂದು ಸಾವಿರ ರೂಪಾಯಿ ವೆಚ್ಚ ತಗುಲಲಿದ್ದು ಇದರಿಂದ ಸಮಾಜದ ತೀರಾ ಅಶಕ್ತ ವರ್ಗದ ಜನರಿಗೆ ಸಹಕಾರಿಯಾಗಲಿದೆ.

ಸಮಾಜದ ಬಡ ಜನರಿಗೆ ಅನುಕೂಲವಾಗಲು ಇನ್ಫೋಸಿಸ್ ಸಂಸ್ಥೆಯು ಮಾಡಿದ ಕೆಲಸ ಶ್ಲಾಘನೀಯ. ವಿಪರ್ಯಾಸವೆಂದರೆ ವಿದ್ಯುತ್ ಚಿತಾಗಾರವನ್ನ ಉದ್ಘಾಟಿಸಲು ಶಾಸಕ ಯು.ಟಿ ಖಾದರ್ ಅವರಲ್ಲಿ ಇದ್ದ ಆಸಕ್ತಿ ಅದನ್ನ ಜನರ ಉಪಯೋಗಕ್ಕೆ ತರುವಲ್ಲೂ ಇರಬೇಕು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹೇಳಿದ್ದಾರೆ.

ವಿದ್ಯುತ್ ಚಿತಾಗಾರದ ಖರ್ಚು,ವೆಚ್ಚ ಮತ್ತು ನಿರ್ವಹಣೆಗೆ ಆಸಕ್ತಿಯುಳ್ಳ ಸಿಬ್ಬಂದಿ ನೇಮಿಸಿ ಅವರಿಗೆ ತರಬೇತಿ ನೀಡಲು ಪ್ರಥಮ ಆದ್ಯತೆ ನೀಡುವಂತೆ ಉಳ್ಳಾಲ ನಗರಸಭೆ ಆಡಳಿತಕ್ಕೆ ಸ್ಪಷ್ಟ ಆದೇಶ ನೀಡಿರುವುದಾಗಿ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

Edited By :
PublicNext

PublicNext

06/08/2022 10:50 am

Cinque Terre

42.87 K

Cinque Terre

2

ಸಂಬಂಧಿತ ಸುದ್ದಿ