ವರದಿ: ರಹೀಂ ಉಜಿರೆ
ಕೊಲ್ಲೂರು: ಕೆಲವು ದಿನಗಳ ಹಿಂದೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಸೌಪರ್ಣಿಕಾ ನದಿ ಮಲಿನವಾದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸವಿಸ್ತಾರ ವರದಿ ಪ್ರಕಟಿಸಿತ್ತು. ಆದರೆ ಇಲ್ಲಿನ ಒಳಚರಂಡಿ ಕಾಮಗಾರಿಯದ್ದು ಇನ್ನೊಂದು ಕತೆ. ಈ ಪ್ರಸಿದ್ಧ ಕ್ಷೇತ್ರದ ಒಳಚರಂಡಿ ಯೋಜನೆಗಾಗಿ 19 ಕೋಟಿ ರೂಪಾಯಿ ಬಿಡುಗಡೆಯಾಗಿದೆ.ಆದರೆ ಯೋಜನೆ ಸಮರ್ಪಕ ರೀತಿಯಲ್ಲಿ ಜಾರಿಯಾಗಿಲ್ಲ ಮಾತ್ರವಲ್ಲ ,ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ಕಾಮಗಾರಿ ಕಳಪೆ ಮಟ್ಟದ್ದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಜ್ಯದಲ್ಲೆ ಹೆಸರು ಮಾಡಿರುವ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರು ದೇವಸ್ಥಾನಕ್ಕೆ ಹೋಗುವ ಭಕ್ತಾಧಿಗಳಿಗೆ ಮಾರ್ಗ ಮಧ್ಯೆ ಕೊಳಚೆ ನೀರಿನ ದರ್ಶನವಾಗುತ್ತಿದೆ.
ಕೊಲ್ಲೂರು ಮೂಕಾಂಬಿಕಾ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರು ಇಲ್ಲಿ ತುಂಬಿ ಹರಿಯುತ್ತಿರುವ ಸೌಪರ್ಣಿಕಾ ಸೇರಿದಂತೆ ಉಳಿದ ಪುಣ್ಯ ತೀರ್ಥಗಳಲ್ಲಿ ಸ್ನಾನ ಮಾಡುವುದು ಸಂಪ್ರದಾಯ. ಆದರೆ ಸರಕಾರ ಕಳೆದ ಐದಾರು ವರ್ಷಗಳ ಹಿಂದೆ ನಡೆಸಿದ ಒಳಚರಂಡಿ ಯೋಜನೆಯ ಅಸಮರ್ಪಕ ಕಾಮಗಾರಿಯಿಂದಾಗಿ ಭಕ್ತರು ಕೊಳಚೆ ನೀರಿನಲ್ಲೇ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನು ಕ್ಷೇತ್ರದಲ್ಲಿರುವ ಸ್ಥಳೀಯ ಲಾಡ್ಜ್ ಮತ್ತು ಹಾಸ್ಟೆಲ್ ಗಳ ನೀರನ್ನು ನೇರವಾಗಿ ನದಿಗೆ ಬಿಡುವುದರಿಂದ, ಭಕ್ತರು ಕಲುಷಿತ ನೀರಲ್ಲೇ ಸ್ನಾನ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಕೊಲ್ಲೂರಿನಲ್ಲಿ 19 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಸರಕಾರದ ಹಣ ಪಡೆದು ಸರಿಯಾದ ಕಾಮಗಾರಿ ನಡೆಸದೆ ಇರುವುದೇ ಈ ಎಲ್ಲ ಸಮಸ್ಯೆಗೆ ಮೂಲ ಕಾರಣ ಅಂತಾರೆ ಸ್ಥಳೀಯರು.
ಒಟ್ಟಿನಲ್ಲಿ ಕೊಲ್ಲೂರಿನ ಪುಣ್ಯ ನದಿಗಳುಕಲುಷಿತಗೊಂಡಿರುವುದರಿಂದ ಭಕ್ತರು ಬೇಸರಗೊಂಡಿದ್ದಾರೆ.ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕಿದೆ.
Kshetra Samachara
10/06/2022 02:37 pm