ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಆಗ ಮಳೆಯಿಂದ ತೊಡಕು; ಈಗ ಕೃಷಿ ಚಟುವಟಿಕೆ ಚುರುಕು

ವಿಶೇಷ ವರದಿ: ರಹೀಂ ಉಜಿರೆ

ಕುಂದಾಪುರ: ಎರಡು ವಾರದಿಂದಲೂ ಸುರಿದ ಭಾರಿ ಮಳೆಯಿಂದಾಗಿ ಕರಾವಳಿ ಭಾಗದ ಭತ್ತ ಬೆಳೆ ಸಂಪೂರ್ಣ ನೆರೆ ಪಾಲಾಗಿತ್ತು. ಸರಕಾರದ ಪರಿಹಾರದ ನಿರೀಕ್ಷೆಯಲ್ಲಿ ಕೈ ಕಟ್ಟಿ ಕೂರದ ರೈತಾಪಿ ಜನ ಸದ್ಯ ಭತ್ತ ನಾಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕುಂದಾಪುರ ಭಾಗದಲ್ಲಿ 2ನೇ ಹಂತದ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ.

ಜುಲೈ ತಿಂಗಳ ನಿರಂತರ ಬಿರುಮಳೆಯಿಂದಾಗಿ ಕರಾವಳಿ ಭಾಗದ ಬಹುತೇಕ ಕೃಷಿ ಭೂಮಿ ನೀರು ಪಾಲಾಗಿದೆ. ಅದರಲ್ಲೂ ವಾರದ ಹಿಂದೆಯಷ್ಟೇ ನಾಟಿ ಮಾಡಿದ್ದ ಭತ್ತದ ಕೃಷಿಭೂಮಿಯಲ್ಲಿ ವಾರ ಕಾಲ ನೀರಿನಲ್ಲೇ ಮುಳುಗಿದ ಪರಿಣಾಮ ಬಹುತೇಕ ಭತ್ತದ ಕೃಷಿ ಸರ್ವ ನಾಶವಾಗಿದೆ. ಹೊತ್ತಿನ ಊಟದ ಜೊತೆಗೆ ಉಳಿದವರಿಗೂ ಅನ್ನ ನೀಡುವ ನಿಟ್ಟಿನಲ್ಲಿ ಬೆಳೆದ ಬೆಳೆ ನೀರು ಪಾಲಾಗಿರುವುದು ರೈತಾಪಿ ವರ್ಗವನ್ನು ನಿದ್ದೆಗೆಡುವಂತೆ ಮಾಡಿದೆ.

ಮಳೆಯಿಂದಾದ ಹಾನಿ ಪರಿಶೀಲನೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಮುಖ್ಯಮಂತ್ರಿಗಳ ತನಕ ಕರಾವಳಿಗೆ ಭೇಟಿ ನೀಡಿ 500 ಕೋಟಿ ಪರಿಹಾರ ಮೊತ್ತ ಘೋಷಣೆ ಮಾಡಿ ತೆರಳಿದ್ದಾರೆ. ಆದರೂ ಕೂಡ ಪರಿಹಾರಕ್ಕೆ ಕಾಯುತ್ತಾ ಕೈ ಕಟ್ಟಿ‌ಕೂರದೆ ಮತ್ತೆ ಕೃಷಿ ಚಟುವಟಿಕೆ ಮುಂದುವರಿಸಿದ್ದಾರೆ ಕೃಷಿಕರು.

ಕುಂದಾಪುರ ತಾಲೂಕು ವ್ಯಾಪ್ತಿಯ ಬಳ್ಕೂರು ಭಾಗದಲ್ಲಿ ನದಿನೀರು ಉಕ್ಕಿ ಹರಿದು ಬಹುತೇಕ ಕೃಷಿ ಭೂಮಿ ಹಾಳಾಗಿದೆ. ಭತ್ತ ಬೆಳೆಯುವ ಕೃಷಿ ಸಂಪೂರ್ಣ ಜಲಾವೃತವಾಗಿ ಬೆಳೆದ ಭತ್ತ ಕೊಳೆತು ಹೋಗಿದೆ. ಸರಕಾರ ಪರಿಹಾರದ ಭರವಸೆ ನೀಡಿದ್ದರೂ ಕೃಷಿಕರು ಮತ್ತೆ 2ನೇ ಬಾರಿ ಭತ್ತ ನಾಟಿ ನಡೆಸಿದ್ದಾರೆ.

ಮಳೆ ಕಡಿಮೆಯಾಗಿ ನೆರೆ ಇಳಿದ ಬಳಿಕ ನೀರಲ್ಲಿ ಮುಳುಗಿ ಕೊಳೆತ ಭತ್ತದ ಗದ್ದೆಯನ್ನು ಹದಗೊಳಿಸಿ ಮತ್ತೆ ನಾಟಿ ಮಾಡಿದ್ದಾರೆ. ಇನ್ನು ಕೆಲವು ಕಡೆ ನಾಟಿಗೆ ಕೃಷಿ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಭತ್ತದ ಬೀಜವನ್ನು ಮೊಳಕೆ ಬರಿಸಿ ಬಳಿಕ ಗದ್ದೆಗಳಿಗೆ ಹಾಕುವ ಕಾರ್ಯ ಕೂಡ ನಡೆಯುತ್ತಿದೆ.

ಮಳೆಯ ಅಬ್ಬರಕ್ಕೆ ಕರಾವಳಿ ಅಕ್ಷರಶಃ ನಲುಗಿರುವುದಂತೂ ಸತ್ಯ. ಸದ್ಯ ಸಂಕಷ್ಟಕ್ಕೆ ಸಿಲುಕಿದ ಕೃಷಿಕರು ಮತ್ತೆ ಕೃಷಿಯತ್ತ‌ ಮರಳಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

Edited By :
PublicNext

PublicNext

21/07/2022 08:26 pm

Cinque Terre

41.43 K

Cinque Terre

1

ಸಂಬಂಧಿತ ಸುದ್ದಿ