ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆ ಮುಲ್ಕಿ ಸಮುದಾಯ ಭವನದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ರಾಜೇಂದ್ರ ಉಪಸ್ಥಿತಿಯಲ್ಲಿ ನಡೆಯಿತು. ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಮಟ್ಟು ಎಂಬಲ್ಲಿ ಕುಡಿಯುವ ನೀರಿನ ಯೋಜನೆಗೆ 33 ಲಕ್ಷ ರೂ. ಮಂಜೂರಾಗಿದ್ದರೂ ಎಸ್ಟಿಮೇಟ್ ಯಾಕೆ ಮಾಡಿಲ್ಲ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂಜಿನಿಯರ್ ನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಈ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದರು. ಮುಲ್ಕಿ ರಾ.ಹೆ.ಅಗಲೀಕರಣದ ವೇಳೆ ಬಸ್ ನಿಲ್ದಾಣದ ಬಳಿ ಸರ್ವಿಸ್ ರಸ್ತೆ ಕೆಲವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದು, ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ ಎಂದು ಮುಲ್ಕಿ ನ.ಪಂ. ಮಾಜಿ ಅಧ್ಯಕ್ಷ ಸುನಿಲ್ ಆಳ್ವ ಹೇಳಿದಾಗ, ಕೂಡಲೇ ಜಿಲ್ಲಾಧಿಕಾರಿಗಳು ಕಾಮಗಾರಿಯ ಗುತ್ತಿಗೆದಾರರಿಗೆ ಡಿಸೆಂಬರ್ ಒಳಗಡೆ ಕಾಮಗಾರಿ ಪೂರ್ತಿ ಗೊಳಿಸಬೇಕು ಇಲ್ಲದಿದ್ದರೆ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೂತನ ಮುಲ್ಕಿ ಬಸ್ ನಿಲ್ದಾಣಕ್ಕೆ 3 ಕೋಟಿ ರೂ. ಮಂಜೂರಾಗಿದ್ದು ಆದಷ್ಟು ಬೇಗ ಕಾಮಗಾರಿ ನಡೆಸುವಂತೆ ಉಸ್ತುವಾರಿ ಸಚಿವರು ಮುಲ್ಕಿ ತಹಶೀಲ್ದಾರ್ ಮಾಣಿಕ್ಯ ಅವರಿಗೆ ಹೇಳಿದರು. ಮಂಗಳೂರು ನಗರಪಾಲಿಕೆಗೆ ಮುಲ್ಕಿ ನ.ಪಂ. ಕುಡಿಯುವ ನೀರಿನ ಬಿಲ್ ಸುಮಾರು 70 ಲಕ್ಷದವರೆಗೆ ಬಾಕಿ ಇದೆ ಯಾಕೆ? ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದಾಗ ಮುಲ್ಕಿ ನ.ಪಂ.ಗೆ ಬರುವ ಕುಡಿಯುವ ನೀರಿನಲ್ಲಿ ಹಳೆಯಂಗಡಿ ಗ್ರಾ.ಪಂ. ಬಳಸಿಕೊಂಡು ಬಿಲ್ ಬಾಕಿ ಇರಿಸಿದೆ. ಈ ಬಗ್ಗೆ ಅನೇಕ ಬಾರಿ ನೋಟಿಸ್ ನೀಡಿದ್ದರೂ ಬಾಕಿ ಸಂದಾಯ ಮಾಡಿಲ್ಲ ಎಂದು ಹೇಳಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಉತ್ತರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಲ್ಕಿ ನ.ಪಂ., ಕಿನ್ನಿಗೋಳಿ, ಮೆನ್ನಬೆಟ್ಟು ಸಹಿತ ಅನೇಕ ಪಂಚಾಯತ್ ಜೊತೆಗೂಡಿ ಎಳತ್ತೂರಿನಲ್ಲಿ ತ್ಯಾಜ್ಯ ಘಟಕ ಸ್ಥಾಪಿಸಿ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಪುನರೂರಿನಲ್ಲಿ ಅಕ್ರಮ ಕಸಾಯಿ ಖಾನೆ ಬಗ್ಗೆ ಏನಾಯಿತು? ಎಂಬ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಕಿನ್ನಿಗೋಳಿ ಪಂಚಾಯತ್ ಪಿಡಿಒ ಕಸಾಯಿಖಾನೆ ಪರವಾನಿಗೆ ರದ್ದುಪಡಿಸಲಾಗಿದೆ ಎಂದು ಹೇಳಿದರು. ಮುಲ್ಕಿ ಪರಿಸರದಲ್ಲಿ ನಡೆದ ಕಳ್ಳತನಗಳ ಬಗ್ಗೆ ಇಲ್ಲಿಯವರೆಗೆ ಬಂತು, ಎಂದು ಕೇಳಿದ ಪ್ರಶ್ನೆಗೆ ತನಿಖೆ ನಡೆಯುತ್ತಿದೆ ಎಂದಷ್ಟೇ ಉತ್ತರ ಪೊಲೀಸ್ ಅಧಿಕಾರಿಗಳು ನೀಡಿದರು. ಕಾರ್ನಾಡುವಿನಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಾಣ, ಮುಲ್ಕಿ ಸರಕಾರಿ ಆಸ್ಪತ್ರೆಗೆ ನೂತನ ಆ್ಯಂಬುಲೆನ್ಸ್, ವೆಂಟಿಲೇಟರ್, ಮಳೆ ಹಾನಿಯ 41 ಲಕ್ಷ ರೂ. ಇನ್ನೂ ಬಂದಿಲ್ಲ ಎಂಬ ದೂರುಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಉಸ್ತುವಾರಿ ಸಚಿವರು ಹೇಳಿದರು. ಮುಲ್ಕಿ ವ್ಯಾಪ್ತಿಯಲ್ಲಿ ಮಲೇರಿಯಾ ಹಾಗೂ ಕೊರೊನಾ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಬೇಕು ಈ ಬಗ್ಗೆ ವೈದ್ಯಾಧಿಕಾರಿಗಳು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಮುಲ್ಕಿನ.ಪಂ. ಆಡಳಿತಾಧಿಕಾರಿ ಮಾಣಿಕ್ಯ ಎನ್., ಮುಖ್ಯಾಧಿಕಾರಿ ಚಂದ್ರಪೂಜಾರಿ ಹಾಗೂ ಮುಲ್ಕಿ ಹೋಬಳಿಯ ಪಂಚಾಯಿತಿಯ ಹಾಗೂ ವಿವಿಧ ಇಲಾಖೆಗಳ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.
Kshetra Samachara
03/11/2020 07:38 pm