ಉಡುಪಿ: ಉಡುಪಿ ನಗರಸಭೆಯಲ್ಲಿ ದಲಿತರ ಮೀಸಲು ಹಣದಲ್ಲಿ ಆರೋಗ್ಯ ಕಾರ್ಡ್ ಯೋಜನೆಯಡಿ ಸತ್ತವರ ಹೆಸರಿನಲ್ಲೂ ಪ್ರೀಮಿಯಂ ಪಾವತಿಸಿ ಲಕ್ಷಾಂತರ ರೂ. ಅವ್ಯವಹಾರ ನಡೆಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆರೋಪಿಸಿದೆ.
ಉಡುಪಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ದಲಿತ ಮುಖಂಡರು, ಕಳೆದ 8 ವರ್ಷಗಳಿಂದ ಈ ಯೋಜನೆಯಡಿ ಮೀಸಲು ಹಣದಲ್ಲಿ 1.24 ಕೋಟಿ ವಿನಿಯೋಗಿಸಲಾಗಿದೆ. ಖಾಸಗಿ ಕಂಪನಿಯೊಂದು ನಗರಸಭೆ ಅಧಿಕಾರಿಗಳೊಂದಿಗೆ ಶಾಮೀಲಾಗಿದೆ. ಉಡುಪಿಯ ಮೂಡುಬೆಟ್ಟು ಒಂದೇ ವಾರ್ಡಿನಲ್ಲಿ 30 ಜನರು ನಿಧನ ಹೊಂದಿದ್ದು, ಅವರೆಲ್ಲರ ಹೆಸರಿನಲ್ಲೂ ಪ್ರೀಮಿಯಂ ಪಾವತಿಸಲಾಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಒಂದೇ ವಾರ್ಡ್ ನಲ್ಲಿ ಈ ರೀತಿ ಮಾಡಿದರೆ, 35 ವಾರ್ಡುಗಳಲ್ಲಿ ಸತ್ತವರ ಸಂಖ್ಯೆ ಇನ್ನೆಷ್ಟು ಇರಬಹುದು? ಅಲ್ಲದೆ ಆರೋಗ್ಯ ಕಾರ್ಡು ಸಂಬಂಧಪಟ್ಟ ಕಂಪನಿ ಅಥವಾ ನಗರಸಭೆ ಈ ತನಕ ಯಾರಿಗೂ ವಿತರಿಸಿಲ್ಲ. ಶೇ. 50 ರಷ್ಟು ಮಂದಿಗೆ ಆರೋಗ್ಯ ಕಾರ್ಡ್ ಪರಿಚಯವೇ ಇಲ್ಲ. ಒಂದು ವರ್ಷಕ್ಕೆ ನಗರಸಭೆ 50 ಲಕ್ಷ ಪ್ರೀಮಿಯಂ ಪಾವತಿಸುತ್ತದೆ. ಈ ಹಣ ಎಲ್ಲಿಗೆ ಹೋಯಿತು? ಇದರಿಂದ ಯಾರಿಗೆ ಪ್ರಯೋಜನವಾಗಿದೆ? ಎಂದು ದಲಿತ ಮುಖಂಡರು ಪ್ರಶ್ನಿಸಿದ್ದಾರೆ.
ಇದಲ್ಲದೆ ನಗರಸಭೆಗೆ ಬಂದಿರುವ ಎಸ್ಸಿ, ಎಸ್ಪಿ ಅನುದಾನ ಬಳಸಿ ಉತ್ತಮ ರಸ್ತೆ ಇದ್ದರೂ ಒಂದೇ ಸ್ಥಳಕ್ಕೆ ಎರಡೆರಡು ಬಾರಿ ಕಾಮಗಾರಿ ನಡೆಸಿದಂತೆ ಅನುದಾನ ಮಂಜೂರು ಮಾಡಲಾಗಿದೆ. ಯೋಜನೆಯಡಿ ಬರುವ ಅನುದಾನ ಎಸ್ಸಿಎಸ್ಟಿ ಫಲಾನುಭವಿಗಳಿಗೆ ನೀಡುವ ಬಗ್ಗೆ ಸುತ್ತೋಲೆ ಇದ್ದರೂ ಲಕ್ಷಾಂತರ ರೂ. ಬೇರೆ ಕಾಮಗಾರಿಗೆ ಬಳಕೆ ಮಾಡಿ ದುರ್ಬಳಕೆ ಮಾಡಲಾಗಿದೆ ಎಂದು ಮುಖಂಡರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ
Kshetra Samachara
24/10/2020 03:30 pm