ಪಬ್ಲಿಕ್ ನೆಕ್ಸ್ಟ್ ಜಾಗೃತ ವರದಿ ನಿಜವಾಯಿತು
ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಮೀನು ಮಾರುಕಟ್ಟೆ ತಿರುವಿನ ಅಪಾಯಕಾರಿ ಕಟ್ಟಡ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದಿದ್ದು ಬುಧವಾರ ಬೆಳಿಗ್ಗೆ ಮುಲ್ಕಿ ನ. ಪಂ. ಮುಖ್ಯಾಧಿಕಾರಿ ಚಂದ್ರ ಪೂಜಾರಿ ಅಣತಿಯಂತೆ ಕಾರ್ಯಾಚರಣೆ ನಡೆದು, ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಕಳೆದ ಕೆಲವು ವರ್ಷಗಳಿಂದ ಮುಲ್ಕಿ ಬಸ್ ನಿಲ್ದಾಣದ ಕೆಳ ಬದಿಯ ಮೀನು ಮಾರುಕಟ್ಟೆ ಬಳಿ ಕೊಳಚಿಕಂಬಳ ತಿರುವಿನಲ್ಲಿ ಅಪಾಯಕಾರಿ ಹಳೆ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯರಾದ ಚೇತನ್ ಆಗ್ರಹಿಸಿದ್ದು "ಪಬ್ಲಿಕ್ ನೆಕ್ಸ್ಟ್ " ಕೂಡ ವರದಿ ಮಾಡಿ ಸಂಬಂಧಪಟ್ಟ ಆಡಳಿತವನ್ನು ಎಚ್ಚರಿಸಿತ್ತು. ಈ ಕಟ್ಟಡ ಹಲವು ವರ್ಷಗಳಿಂದ ಹಂತಹಂತವಾಗಿ ಕುಸಿಯುತ್ತಾ ಬಂದಿದ್ದು, ಈಗಲೋ ಆಗಲೋ ಎನ್ನುವಂತಿತ್ತು. ಮುಲ್ಕಿ ಮಾರುಕಟ್ಟೆ ಬಳಿ ಅಪಾಯ ಸಂಭವಿಸುವ ಮೊದಲೇ ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿದ್ದರು. ಕಟ್ಟಡವು ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತಕ್ಕೆ ಸೇರಿದ್ದು ಹಾಗೂ ಅದರಲ್ಲಿ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲೀಕರ ನಡುವೆ ವ್ಯಾಜ್ಯ ಉಂಟಾಗಿ ಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು.
ಆದರೆ, ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕಟ್ಟಡದ ಒಂದು ಪಾರ್ಶ್ವ ಕುಸಿದು ಮತ್ತಷ್ಟು ಅಪಾಯಕಾರಿಯಾಗಿತ್ತು. ಕೂಡಲೇ ಸ್ಥಳೀಯ ಯುವಕರಾದ ನಾಗರಾಜ ಬಪ್ಪನಾಡು, ಚೇತನ್ ಮುಲ್ಕಿ ಮತ್ತಿತರರು ಮುಲ್ಕಿ ನ.ಪಂ. ಮುಖ್ಯಾಧಿಕಾರಿಗೆ ದೂರು ನೀಡಿದ್ದು, ಮುಖ್ಯಾಧಿಕಾರಿ ಚಂದ್ರ ಪೂಜಾರಿ ಸಹಿತ ಸಿಬ್ಬಂದಿ ಪ್ರಕಾಶ್, ಕಿಶೋರ್, ನವೀನ್ ಚಂದ್ರ ಹಾಗೂ ವೆಂಕಟರಮಣ ದೇವಸ್ಥಾನದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಕಟ್ಟಡ ತೆರವುಗೊಳಿಸಲಾಯಿತು.
ಅಪಾಯಕಾರಿ ಕಟ್ಟಡ ತೆರವಿಗೆ "ಪಬ್ಲಿಕ್ ನೆಕ್ಸ್ಟ್" ಮೂಲಕ ಸಂಬಂಧಪಟ್ಟ ಆಡಳಿತವನ್ನು ಎಚ್ಚರಿಸಿದ ಬಗ್ಗೆ ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ. ಈ ಕಟ್ಟಡ ಬಳಿಯೇ ಇನ್ನೊಂದು ಅಪಾಯಕಾರಿ ಕಟ್ಟಡವಿದ್ದು ಅದನ್ನೂ ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
14/10/2020 12:50 pm