ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಸಂದರ್ಭ ಕಳಪೆ ಕಾಮಗಾರಿ ಮತ್ತು ರಸ್ತೆಗೆ "ಅವಸರದ ತೇಪೆ"' ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆಯಷ್ಟೇ? ಉಡುಪಿ ಮತ್ತು ಪರ್ಕಳದಲ್ಲೂ ರಸ್ತೆಗೆ ತೇಪೆ ಹಾಕಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಮಳೆ ಪ್ರತಾಪದ ಮುನ್ನವೇ ಕೆಲ ಭಾಗದ ರಸ್ತೆಗಳಲ್ಲಿ ಹೊಂಡಾಗುಂಡಿಗಳು ತುಂಬಿದ್ದು, ಡಾಂಬರು ಅದೃಶ್ಯವಾಗಿದೆ!
ಉಡುಪಿ- ಮಣಿಪಾಲ ಪ್ರಮುಖ ರಸ್ತೆಯಲ್ಲಿ ಸಿಗುವ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಇದಕ್ಕೆ ತಾಜಾ ಉದಾಹರಣೆ. ಬಹುತೇಕ ಪ್ರತಿ ಮಳೆಗಾಲದಲ್ಲೂ ಸಿಂಹಸ್ವಪ್ನವಾಗಿ ಕಾಡುವ ಇಂದ್ರಾಳಿ ಬ್ರಿಡ್ಜ್ ಈ ವರ್ಷ ಮಳೆಗಾಲ ಕಾಲಿಡುವ ಮುನ್ನವೇ ಸಂಚಾರಕ್ಕೆ ಅಯೋಗ್ಯ ಎನಿಸಿದೆ. ಗಮನಿಸಬೇಕಾದ ಸಂಗತಿ ಎಂದರೆ, ಕೆಲ ದಿನಗಳ ಹಿಂದೆ ಸಿಎಂ ಜಿಲ್ಲಾ ಪ್ರವಾಸ ಕೈಗೊಂಡಿದ್ದಾಗ ಈ ರಸ್ತೆಯ ಹೊಂಡಗಳಿಗೆ ತೇಪೆ ಹಾಕಲಾಗಿತ್ತು. ಆದರೆ, ಒಂದೆರಡು ಮಳೆಗೇ ರಸ್ತೆ ಗುಂಡಿಮಯವಾಗಿದೆ.
ಕೇವಲ ಇಂದ್ರಾಳಿ ಮಾತ್ರವಲ್ಲ, ಇತ್ತೀಚೆಗಷ್ಟೆ ಕಾಮಗಾರಿ ಪೂರ್ಣಗೊಂಡ ಅಂಬಾಗಿಲು- ಮಣಿಪಾಲ ರಸ್ತೆ ಕತೆಯೂ ಇದೇ. ಇನ್ನು ಪರ್ಕಳದಲ್ಲೂ ಇದೇ ರೀತಿ ಇತ್ತೀಚೆಗೆ ತಾತ್ಕಾಲಿಕ ತೇಪೆ ಹಾಕಲಾಗಿದ್ದು, ಅಲ್ಲೂ ರಸ್ತೆ ಗುಂಡಿಗಳು ವಾಹನ ಸವಾರರ ತಾಳ್ಮೆ ಪರೀಕ್ಷಿಸುತ್ತಿವೆ!
ರಾಜ್ಯ ಸರಕಾರದ ವಿರುದ್ಧ ಖುದ್ದು ಗುತ್ತಿಗೆದಾರರೇ 40% ಕಮಿಷನ್ ಆರೋಪ ಮಾಡಿದ್ದರು. ಇದೀಗ ಉಡುಪಿಯ ಪ್ರಮುಖ ರಸ್ತೆಗಳ ಗುಣಮಟ್ಟ ನೋಡುವಾಗ 40% ಗೂ ಹೆಚ್ಚು ಕಮಿಷನ್ ದಂಧೆ ಇರಬಹುದು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ವಿಶೇಷ ವರದಿ: ರಹೀಂ ಉಜಿರೆ
Kshetra Samachara
27/06/2022 08:23 pm