ಕುಂದಾಪುರ: ಜಿಲ್ಲೆಯ ಕುಂದಾಪುರ ತಾಲೂಕಿನ ಸಾಲಿಗ್ರಾಮ ಕೋಡಿ ಭಾಗದಲ್ಲಿ ಹರಿಯುವ ಸೀತಾ ನದಿಯ ಉಪನದಿ ಇದು. ಹೊಳೆ ಮೀನಿಗೆ ಈ ನದಿ ಪ್ರಸಿದ್ಧಿ ಕೂಡ. ಈ ನದಿಯಲ್ಲಿ ಮೀನುಗಾರಿಕೆ ನಡೆಸಿ ಜೀವನ ನಡೆಸುವ ಮೀನುಗಾರರು ಒಂದು ಕಡೆಯಾದರೆ, ಇದೇ ನದಿಯಲ್ಲಿ ಪಂಜರ ಮೀನುಗಾರಿಕೆ ಕೃಷಿ ಮಾಡಿ ಬದುಕು ಕಟ್ಟಿಕೊಂಡ ಮಂದಿ ಅನೇಕರಿದ್ದಾರೆ.
ಆದರೆ ಸದ್ಯ ಈ ನದಿಯಲ್ಲಿ ಎಲ್ಲಿ ನೋಡಿದರೂ ಸತ್ತ ಮೀನುಗಳೇ ತೇಲಾಡುತ್ತಿವೆ. ಕಲುಷಿತ ನೀರಿನ ಮಿಶ್ರಿಣದಿಂದ ನದಿಯಲ್ಲಿ ಮೀನುಗಳು ಈ ರೀತಿ ಸಾವನ್ನಪ್ಪಿದೆ ಎನ್ನುತ್ತಾರೆ ಸ್ಥಳೀಯರು.
ಸಾಲಿಗ್ರಾಮ ತೋಡ್ಕಟ್ಟು ಬಳಿ ಸೇತುವೆ ನಿರ್ಮಾಣ ಕಾರಣ ಹೊಳೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿತ್ತು. ಏಕಾಏಕಿ ತಡೆಯನ್ನು ತೆರವುಗೊಳಿಸಿದ ಕಾರಣ ಕೊಳಕು ಮಿಶ್ರಿತ ನೀರಿನಿಂದ ಮೀನುಗಳ ಮಾರಣ ಹೋಮ ನಡೆದಿದೆ. ರಾಶಿ ರಾಶಿ ಮೀನುಗಳು ಸತ್ತು ಬಿದ್ದು ಗ್ರಾಮಕ್ಕೆ ಗ್ರಾಮವೇ ದುರ್ವಾಸನೆ ಬೀರುತ್ತಿದೆ. ಅಷ್ಟೇ ಅಲ್ಲ, ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ವರ್ಷ ಪೂರ್ತಿ ಶ್ರಮ ವಹಿಸಿ ಮೀನುಗಾರ ಕುಟುಂಬಗಳು ನದಿನೀರಿನಲ್ಲಿ ಮಾಡಿದ್ದ ಪಂಜರ ಮೀನು ಕೃಷಿ ಕೂಡ ನೀರಲ್ಲಿ ಇಟ್ಟ ಹೋಮದಂತಾಗಿದೆ. ಇಲ್ಲಿರುವ ಫಿಶ್ ಮಿಲ್‌ಗಳ ರಸಾಯನಿಕ ಮಿಶ್ರಿತ ನೀರು ನದಿಗೆ ಸೇರಿರುವ ಕಾರಣ ಮೀನುಗಳು ನಾಶವಾಗಿವೆ.
ಕೇವಲ ಮೀನುಗಳು ಮಾತ್ರವಲ್ಲ, ನದಿಯಲ್ಲಿ ಜೀವಿಸುತ್ತಿದ್ದ ಬಹುತೇಕ ಜಲಚರಗಳು ನಾಶವಾಗಿವೆ.ಸಂಬಂಧಪಟ್ಡ ಇಲಾಖೆ ಅಧಿಕಾರಿಗಳು ತಕ್ಷಣ ಇಲ್ಲಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Kshetra Samachara
15/06/2022 06:48 pm