ಸುಬ್ರಮಣ್ಯ: ಜನರ ಆಗುಹೋಗುಗಳಿಗೆ ಪೊಲೀಸರು ಬೇಕು. ಜೋರು ಮಳೆ ಬಂದರೂ ಇವರು ಬೇಕು. ಜನರ ಬೇಕು ಬೇಡಗಳಲ್ಲಿ ಇವರು ಬೇಕು. ಆದರೆ ದೇಶದ ಪ್ರಾಮುಖ್ಯ ಧಾರ್ಮಿಕ ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಮಾಡಿಗೆ ಮಾತ್ರ ಟರ್ಪಾಲೇ ಬೇಕು. ಯಾಕೆಂದರೆ ಠಾಣೆಯ ಮಾಡಿನ ರಿಪೇರಿಗೆ ಹಣವಿಲ್ಲದೆ ನೀರು ಸೋರುವಿಕೆ ತಡೆಯಲು ಟರ್ಪಾಲು ಹೊದಿಸಲಾಗಿದೆ.
ಸುಬ್ರಹ್ಮಣ್ಯ ಠಾಣೆಯ ಮಾಡು ಬಹಳವಾಗಿ ಶಿಥಿಲವಾಗಿ ಮಾಡು 3 - 4 ವರ್ಷ ಆಯ್ತು. ಒಳ ಭಾಗದ ಮಾಡು ಶಿಥಿಲಗೊಂಡಿದೆ, ಮಾಡಿನ ಹಂಚುಗಳ ಮಧ್ಯೆ ಅಲ್ಲಲ್ಲಿ ನೀರು ಸೋರುತ್ತಿದೆ. ಕೇಸಿನ ಪೈಲ್ ಗಳು ಒದ್ದೆಯಾಗುವುವ ಭಯವಿದೆ. ಅಪರಾಧಿಗಳ ದಸ್ತಗಿರಿ ಮಾಡಿ ಕೂಡಿಹಾಕುವ ಕೊಠಡಿಯಲ್ಲಿ ನೀರು ತುಂಬುತಿದೆ. ಇಷ್ಟೆಲ್ಲಾ ಇದ್ದಾಗ ಟರ್ಪಾಲು ಹೊದಿಸುವುವ ಅನಿವಾರ್ಯತೆ ಇದ್ದೇ ಇದೆ.
ಪೊಲೀಸ್ ಇಲಾಖೆಯ ಗೌರವ ಬೇಕು, ಇಲ್ಲಿನ ಸಮಸ್ಯೆ ಯಾರಿಗೂ ಬೇಡ:
ಹೇಳಿ ಕೇಳಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದಕ್ಷಿಣ ಭಾರತದಲ್ಲೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇಲ್ಲಿ ದಿನಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆಗಾಗ ಗಣ್ಯರು ಆಗಮಿಸುತ್ತಿರುತ್ತಾರೆ. ಪೊಲೀಸ್ ಇಲಾಖೆಯ ನಿವೃತ್ತ ಕಮಿಷನರ್, ನಿವೃತ್ತ ನ್ಯಾಯಾಧೀಶರು, ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾದೀಶರು, ಅಧಿಕಾರಿಗಳು, ಹಾಲಿ ಎಸ್ಪಿ, ಡಿವೈಎಸ್ಪಿ, ಇನ್ಸ್ ಪೆಕ್ಟರ್ ಗಳು ಮತ್ತಿತರ ಇಲಾಖಾ ಅಧಿಕಾರಿಗಳು ಬರುತ್ತಾರೆ. ಇಲ್ಲಿ ಬಂದರೆ ಕೆಲವೊಮ್ಮೆ ಸ್ವಾಮಿ ಕಾರ್ಯ, ಸ್ವಾಕಾರ್ಯ ಎರಡೂ ಆಗುತ್ತದೆ. ಬರುತ್ತಿರುವ ಇವರೆಲ್ಲ ಇಲ್ಲಿನ ಠಾಣೆಯೇ ಸಕಲ ವ್ಯವಸ್ಥೆ ಮಾಡಬೇಕು. ದೇವರ ದರ್ಶನ ಭಾಗ್ಯ, ವಸತಿ, ದೇವಸ್ಥಾನದ ಶಿಷ್ಟಾಚಾರ, ಪೊಲೀಸರ ಗೌರವ ಎಲ್ಲವನ್ನೂ ಸ್ವೀಕರಿಸುತ್ತಾರೆ ಆದರೆ ಇಲ್ಲಿನ ಪೊಲೀಸ್ ಸಿಬ್ಬಂದಿಗಳು ಉಳಿದುಕೊಳ್ಳುವ ಠಾಣೆಯನ್ನು ಮೇಲ್ದರ್ಜೆಗೆ ಏರ್ಪಡಿಸುವ ಮನಸ್ಸು ಮಾಡಿಲ್ಲ.
ಗೃಹ ಸಚಿವರೇ ಬಂದರು, ಕೋಟಿ ಹಣ ಘೋಷಿಸಿದರು :
ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗೃಹಸಚಿವ ಅರಗ ಜಾನೇಂದ್ರ ಬಂದಿದ್ದು ಈ ಸಂದರ್ಭ ಪತ್ರಿಕಾಗೋಷ್ಠಿ ನಡೆಸಿದ್ದ ಅವರು ಸುಬ್ರಹ್ಮಣ್ಯ ಠಾಣೆಗೆ ಒಂದು ಕೋಟಿ ಅನುದಾನವಿದ್ದು ಶೀಘ್ರವೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ ಕೋಟಿ ಅನುದಾನ ಟೆಂಡರ್ ಕರೆದದ್ದಾಗಲಿ, ಅನುದಾನ ಬಿಡುಗಡೆ ಮಾಡಿದ್ದಾಗಲಿ ಮಾತ್ರ ಗೊತ್ತಾಗಿಲ್ಲ. ಠಾಣೆಯ ಮಾಡು ಬೀಳುವ ಮುಂಚೆ ಹೊಸ ಕಟ್ಟಡಕ್ಕೆ ಶಿಲನ್ಯಾಸವಾದರೆ ಸಾಕು.
ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿ ಠಾಣೆ ಇಲ್ಲ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ವತಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ದೇವಸ್ಥಾನಕ್ಕೆ ಸಂಬಂಧಪಟ್ಟ ಶಾಲೆ, ಆರೋಗ್ಯ ಇಲಾಖೆಗೆ ಕಟ್ಟಡ ಕಟ್ಟಿದ್ದು, ಕಸ ವಿಲೇವಾರಿ ಘಟಕ ನಿರ್ಮಿಸಿದ್ದು, ಶವಸಂಸ್ಕಾರಕ್ಕೆ ಕಟ್ಟಡ ನಿರ್ಮಾಣ ಮಾಡಿದ್ದು ಇದೆ. ಆದರೆ ಪೋಲಿಸ್ ಠಾಣೆಗೆ ಸಂಬಂಧಪಟ್ಟ ಯಾವುದೇ ಅನುದಾನ ಇರಿಸುವುದಾಗಲೀ ಕಟ್ಟಿಕೊಡುವ ವ್ಯವಸ್ಥೆ ಮಾಡುವ ನಿಯಮಗಳು ಇಲ್ಲದ ಕಾರಣ ದೇವಸ್ಥಾನ ವತಿಯಿಂದ ಮಾಸ್ಟರ್ ಪ್ಲಾನ್ ನಲ್ಲಿ ಈ ಬಗ್ಗೆ ಯಾವುದೇ ಅನುದಾನ ಇಡುವಂತಿಲ್ಲ. ಮಾನವೀಯ ನೆಲೆಯಲ್ಲಿ ಠಾಣೆಗೆ ಷಷ್ಠಿ ಜಾತ್ರೆಯ ಸಂದರ್ಭ ಪೈಂಟಿಂಗ್ ಮಾಡಿ ಕೊಟ್ಟದಿದೆ.
2017 ರಲ್ಲೇ ಕೋಟಿ ಹಣ ಇಟ್ಟಿದ್ದರು:
2017 ನೇ ಇಸವಿಯಲ್ಲಿ 1. 23 ಕೋಟಿ ಹಣ ಸರಕಾರ ಸುಬ್ರಹ್ಮಣ್ಯ ಠಾಣೆಗಾಗಿ ಇರಿಸಿತ್ತು. ಆದರೆ ಅದು ಟೆಂಡರ್ ಆಗಿ ಬಿಡುಗಡೆಗೊಂಡಾಗ 4 ವರ್ಷ ಕಳೆದಿದ್ದು ಆ ಮೊತ್ತಕ್ಕೆ ಸುಬ್ರಹ್ಮಣ್ಯ ಠಾಣೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿದುಬಂದಿತ್ತು. ಹೆಚ್ಚುವರಿ ಹಣ ಬೇಕು ಎಂದು ಪೊಲೀಸ್ ಇಲಾಖೆ ಸರ್ಕಾರಕ್ಕೆ ಕೇಳಿಕೊಂಡಿದ್ದರೂ ಹೆಚ್ಚುವರಿ ಹಣ ಸೇರ್ಪಡೆಗೊಂಡು ಹಣ ಬಿಡುಗಡೆ ಯಾವಗ ಆಗುತ್ತದೆ ಎಂದು ಕಾದು ನೋಡಬೇಕು.
Kshetra Samachara
08/06/2022 06:23 pm