ಕುಂದಾಪುರ: ಇಲ್ಲಿನ ಆಲೂರು ಗ್ರಾಮದ ಐದು ಸೆಂಟ್ಸ್ ಕಾಲೋನಿ ಬಳಿ ಸರ್ಕಾರಿ ಭೂಮಿಯಲ್ಲಿದ್ದ ರಸ್ತೆ ಬಂದ್ ಮಾಡಿ ನಡೆಯುತ್ತಿರುವ ಕಲ್ಲು ಕ್ವಾರಿ ವಿರುದ್ಧ ಧ್ವನಿ ಎತ್ತಿದ ಸಾರ್ವಜನಿಕರ ಅಹವಾಲು ಆಲಿಸಲು ಹೋದ ಕುಂದಾಪುರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಮುಂದೆಯೇ ಪುಂಡರು ಅಟ್ಟಹಾಸ ಮೆರೆದಿದ್ದಾರೆ.
ಹದಿನೈದು ದಿನಗಳಿಂದ ಗಣಿಗಾರಿಕೆ ನಡೆಸುತ್ತಿರುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಆಲೂರು ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಗಣಿಗಾರಿಕೆ ನಿಂತಿರಲಿಲ್ಲ. ಆಲೂರಿಗೆ ಭೇಟಿ ನೀಡಿದ ತಹಶೀಲ್ದಾರ್‌ಗೆ ಪರಿಸರ ವಾಸಿಗಳು ಕೆಂಪುಕಲ್ಲು ಗಣಿ ಅವಾಂತರದ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರಿ ಜಾಗದಲ್ಲಿ ಗಣಿ ನಡೆಸುವುದಕ್ಕೆ ಪರವಾನಗಿ ಕೊಟ್ಟವರಾರು? ಅಕ್ರಮ ಗಣಿ ನಡೆಸುವುದಲ್ಲದೆ ಶಾಲಾ ಮಕ್ಕಳು, ಪಾದಚಾರಿಗಳು ಸಂಚರಿಸುತ್ತಿದ್ದ ರಸ್ತೆ ಬಂದ್ ಗಣಿ ಮಾಡಿರುವುದನ್ನು ಪ್ರಶ್ನಿಸಿದ ತಹಶೀಲ್ದಾರ್‌ಗೆ ಗಣಿ ಧಣಿ ಡೋಂಟ್‌ಕೇರ್ ಎಂದಿದ್ದು, ಕೃಷಿ ಮಾಡುವುದಕ್ಕೆ ಕಲ್ಲು ಕಡಿದರೆ ತಪ್ಪೇನು ಎಂದು ಮರುಪ್ರಶ್ನೆ ಮಾಡಿದ್ದಾರೆ. ತಹಶೀಲ್ದಾರ್ ಜತೆಯಲ್ಲಿ ಬಂದ ಪತ್ರಕರ್ತನಿಗೆ ಅವಾಚ್ಯ ಶಬ್ದದಿಂದ ನಿಂದಿಸಿ, ಏನು ಬೇಕಾದರೂ ಮಾಡಿ ನಾವು ಕಲ್ಲು ಕಡಿಯುವುದು ನಿಲ್ಲಿಸುವುದಿಲ್ಲ ಎಂದು ಹೇಳಿ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ ಪ್ರಸಂಗ ನಡೆದಿದೆ.
ಸರ್ಕಾರಿ ಜಾಗದಲ್ಲಿ ಕೆಂಪುಕಲ್ಲು ಗಣಿ ಮಾಡುವುದಕ್ಕೆ ಹೇಳಿದವರಾರು ಎಂದು ತಹಶೀಲ್ದಾರ್ ಕೇಳಿದ್ದಾರೆ. ಈ ವೇಳೆ ಗಣಿ ಮಾಲೀಕ, 'ಆಲೂರಲ್ಲಿ ಎಲ್ಲ ಕಡೆ ಗಣಿಗಾರಿಕೆ ನಡೆಯುತ್ತಿರುವುದು ಕುಮ್ಕಿ ಹಾಗೂ ಸರ್ಕಾರಿ ಜಾಗದಲ್ಲಿ' ಎಂದು ಉದ್ಧಟತನದ ಉತ್ತರ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಹಶೀಲ್ದಾರ್, ಸ್ಥಳದಲ್ಲೇ ಅಕ್ರಮ ಗಣಿ ವಿರುದ್ಧ ದಂಡ ಪ್ರಯೋಗ ಮಾಡುವುದಾಗಿ ಎಚ್ಚರಿಸಿ ಆರ್‌ಐಗೆ ಸರ್ಕಾರಿ ಜಾಗಕ್ಕೆ ಬೇಲಿ ಹಾಕಿ, ಕಲ್ಲು ಕ್ವಾರಿ ನಡೆಸದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
Kshetra Samachara
03/06/2022 05:12 pm