ಕಡಬ: ತಾವು ಕಲಿತ ಶಾಲೆಯ ಜಾಗದ ಅತಿಕ್ರಮಣ ನಿಲ್ಲಿಸಲು ಗ್ರಾಮಸ್ಥರು ಪ್ರಧಾನಮಂತ್ರಿಯ ಮೊರೆ ಹೋಗಿದ್ದಾರೆ. ಕಳೆದ ಏಳು ವರ್ಷಗಳಿಂದ ತಮ್ಮ ಶಾಲೆಯ ಜಮೀನನ್ನು ಉಳಿಸುವ ನಿಟ್ಟಿನಲ್ಲಿ ಹಲವು ರೀತಿಯ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ಈ ಗ್ರಾಮಸ್ಥರಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲ. ಗ್ರಾಮಸ್ಥರ ದೂರಿಗೆ ಸ್ಪಂದಿಸಿರುವ ಪ್ರಧಾನಮಂತ್ರಿ ಕಛೇರಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಆದರೂ ಈವರೆಗೆ ಯಾವೊಬ್ಬ ಅಧಿಕಾರಿಗಳೂ ಶಾಲೆಯ ಜಾಗ ಉಳಿಸಲು ಮುಂದಾಗಿಲ್ಲ ಎನ್ನಲಾಗಿದೆ.
ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ದತ್ತು ಗ್ರಾಮವಾದ ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇನ್ಯ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಸುಮಾರು 2 ಎಕರೆಗೂ ಮಿಕ್ಕಿದ ಭೂಮಿಯಿದೆ. ಆದರೆ ಈ ಭೂಮಿಯಲ್ಲಿ ಸುಮಾರು 97 ಸೆಂಟ್ಸ್ ಜಾಗವನ್ನು ಶಾಲೆಯ ಪಕ್ಕದಲ್ಲೇ ಇರುವ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿರುವುದಲ್ಲದೇ ಕಂದಾಯ ಅಧಿಕಾರಿಗಳ ಜೊತೆ ಸೇರಿಕೊಂಡು ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಇದೀಗ ಸರಕಾರದ ಅಕ್ರಮ-ಸಕ್ರಮ ಕಾನೂನಿನಡಿ 60 ಸೆಂಟ್ಸ್ ಜಾಗವನ್ನು ತನ್ನ ಹೆಸರಿಗೂ ಮಾಡಿಕೊಂಡಿದ್ದಾರೆ.
2015ರಲ್ಲಿ ನಡೆದ ಈ ಪ್ರಕ್ರಿಯನ್ನು ನಿರಂತರವಾಗಿ ಪ್ರತಿಭಟಿಸುತ್ತಾ ಬರುತ್ತಿರುವ ಕೇನ್ಯ ಗ್ರಾಮಸ್ಥರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಶಾಲೆಯ ಜಾಗವನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಅಕ್ರಮ-ಸಕ್ರಮ ಸಮಿತಿಯ ಮುಂದೆ ಒಂದು ನಕ್ಷೆಯನ್ನು ತೋರಿಸಿ ಭೂಮಿ ಪಡೆದುಕೊಂಡಿರುವ ಈ ವ್ಯಕ್ತಿ ಜಾಗಕ್ಕೆ ಬೇಕಾದ ದಾಖಲೆಗಳನ್ನು ರೆಡಿ ಮಾಡಲು ಇನ್ನೊಂದು ನಕ್ಷೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಮುಂದೆ ಇಡುತ್ತಿದ್ದ ವಿಚಾರ ಇದೀಗ ಗ್ರಾಮಸ್ಥರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದ ದಾಖಲೆಗಳಿಂದ ತಿಳಿದು ಬಂದಿದೆ.
Kshetra Samachara
09/03/2022 07:02 pm