ವರದಿ: ರಹೀಂ ಉಜಿರೆ
ಮಲ್ಪೆ : ಬೇಸಿಗೆ ಮುಗಿದು ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಮೀನುಗಾರಿಕೆ ನಿಂತಿದೆ. ಆದರೆ ಸರ್ವ ಋತು ಬಂದರು ಎನಿಸಿರುವ ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಇದೆ,ಜೊತೆಗೆ ನಿಲ್ಲಿಸಿದ ಬೋಟ್ ಗಳಿಗೆ ರಕ್ಷಣೆಯೂ ಇಲ್ಲದಂತಾಗಿದೆ.
ಉಡುಪಿಯ ಮಲ್ಪೆಯಲ್ಲಿ ಏಶ್ಯಾದಲ್ಲೇ ಗುರುತಿಸಿಕೊಂಡಿರುವ ಸರ್ವ ಋತು ಮೀನುಗಾರಿಕಾ ಬಂದರಿದೆ. ಮಂಗಳೂರು ಹಾಗೂ ಕಾರವಾರ ನಡುವೆ ಇರುವ ಈ ಬಂದರಿನಲ್ಲಿ ಬಹುಕೋಟಿಯ ಮೀನುಗಾರಿಕೆ ನಡೆಯುತ್ತದೆ. ಡಿಸೇಲ್ ಸಮಸ್ಯೆ,ಆಳಸಮುದ್ರ ಮೀನುಗಾರಿಕೆಯ ಸವಾಲಿನ ನಡುವೆ ಮತ್ತೊಂದು ಸಮಸ್ಯೆ ಮೀನುಗಾರನ್ನು ಕಾಡುತ್ತಿದೆ. ಸದ್ಯ ಮಳೆಗಾಲ ಆರಂಭವಾದ ಹಿನ್ನಲೆಯಲ್ಲಿ ಬೋಟ್ ಗಳು ಬಂದರು ಸೇರಿವೆ. ಆದರೆ ಇಲ್ಲಿರುವ ಬಂದರ್ ನಲ್ಲಿ ಬೋಟ್ ಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲ ಎಂಬುದು ಮೀನುಗಾರರ ಹಲವು ವರ್ಷಗಳ ಅಳಲು.
ಮಲ್ಪೆ ವ್ಯಾಪ್ತಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೋಟ್ ಗಳಿವೆ. ಆದರೆ 1 ಸಾವಿರ ಬೋಟ್ ಗಳು ನಿಲ್ಲುವುದಕ್ಕೆ ಮಾತ್ರ ಅವಕಾಶವಿದೆ.ಇದಲ್ಲದೆ ಇಲ್ಲಿ ಯಾವುದೇ ರಕ್ಷಣೆಯೂ ಇಲ್ಲ.ಕಳ್ಳಕಾಕರ ಉಪಟಳ ಜೋರಾಗಿದೆ.ಸಿಸಿ ಕ್ಯಾಮೆರಾ ವ್ಯವಸ್ಥೆಯೂ ಇಲ್ಲ.ಇತ್ತೀಚಿನ ವರ್ಷಗಳಲ್ಲಿ ನಿಲ್ಲಿಸಿದ ಬೋಟ್ ಗಳಿಂದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವುದು ಸಾಮಾನ್ಯವಾಗಿದೆ.ಆದ್ದರಿಂದ ಮೀನುಗಾರಿಕಾ ಇಲಾಖೆ ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದರ ಜೊತೆಗೆ ಬೋಟ್ ಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮೀನುಗಾರರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ಬೋಟ್ ನಿಲುಗಡೆ ಜಾಗ ಮಾಡಿಕೊಳ್ಳುವುದಕ್ಕೆ ಒದ್ದಾಡುವ ಸ್ಥಿತಿ ಮೀನುಗಾರರದ್ದು.ಇನ್ನೊಂದೆಡೆ ಕೋಟ್ಯಂತರ ಬೆಲೆ ಬಾಳುವ ಬೋಟ್ ಗಳಿಗೆ ಯಾವುದೇ ರಕ್ಷಣೆ ಯೂ ಇಲ್ಲ.ಸಂಬಂಧಪಟ್ಟ ಇಲಾಖೆ ತಕ್ಷಣ ಇತ್ತ ಕಡೆ ಗಮನ ಹರಿಸಬೇಕಿದೆ.
Kshetra Samachara
13/06/2022 11:00 pm