ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಕರಾವಳಿಯಲ್ಲಿ ಖಾಸಗಿ ಬಸ್ ಗಳದ್ದೇ ದರ್ಬಾರು. ಇಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇತ್ತೀಚೆಗೆ ಕೆಎಸ್ ಆರ್ ಟಿಸಿ ನರ್ಮ್ ಬಸ್ ಗಳನ್ನು ಜನರ ಅನುಕೂಲಕ್ಕಾಗಿ ಆರಂಭಿಸಿತ್ತು. ಆದರೀಗ ಖಾಸಗಿ ಬಸ್ ಲಾಬಿಯಿಂದಾಗಿ ನರ್ಮ್ ಬಸ್ ಎತ್ತಂಗಡಿಯಾಗುವ ಭೀತಿ ಎದುರಾಗಿದೆ!
ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯರಿಗೆ, ಅದೆಷ್ಟೋ ಗ್ರಾಮೀಣರಿಗೆ ನರ್ಮ್ ಬಸ್ ಸಂಪರ್ಕ ಕೊಂಡಿಯಾಗಿತ್ತು. ದಿನನಿತ್ಯ ಸಾವಿರಾರು ಮಂದಿ ನರ್ಮ್ ಬಸ್ ಬಳಸ್ತಾ ಇದ್ದರು. ಆದರೆ, ಇತ್ತೀಚೆಗೆ ನರ್ಮ್ ಬಸ್‌ನ ' ನಿರ್ನಾಮ'ಕ್ಕೆ ಸಿದ್ಧತೆ ನಡೆಯುತ್ತಿವೆ.
ಈಗಾಗಲೇ ಜಿಲ್ಲೆಯಲ್ಲಿ 'ನರ್ಮ್' ಸಂಚಾರ ಕಡಿಮೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಇಲ್ಲಿ 49 ರೂಟ್ ಗಳಲ್ಲಿ ನರ್ಮ್ ಓಡಾಟ ಆರಂಭಿಸಲಾಗಿತ್ತು. ಆದರೆ, ಕೊರೊನಾ ದಾಳಿ ಬಳಿಕ ಲಾಕ್ ಡೌನ್ ನೆಪದಲ್ಲಿ ಈ ' ನರ್ಮ್' ನ ಕತ್ತು ಹಿಸುಕುವ ಕಾರ್ಯ ನಡೆದಿದೆ.
ಯಾವಾಗ ನರ್ಮ್ ಬಸ್ ಮೇಲೆ ಖಾಸಗಿ ಬಸ್ ಲಾಬಿಯ ಕರಾಳ ಛಾಯೆ ಮೂಡತೊಡಗಿತೋ ಆಗ ಬಸ್ ಮೂಲೆ ಸೇರಲಾರಂಭಿಸಿತು.
ಈ ಮೊದಲು ಉಡುಪಿಯಿಂದ 41 ನರ್ಮ್ ಬಸ್ ಸಂಚರಿಸುತ್ತಿತ್ತು. ಈಗ ಸಂಖ್ಯೆ ಅರ್ಧಕ್ಕಿಳಿದಿವೆ. 3 ಬಸ್ಸನ್ನು ಈಗಾಗಲೇ ಹಾಸನ ಡಿಪೋಗೆ ವರ್ಗಾಯಿಸಲಾಗಿದೆ. ಇನ್ನು ಉಳಿದ ಬಸ್‌ಗಳು ಡಿಪೋದಲ್ಲೇ ಇವೆ.
ಖಾಸಗಿ ಬಸ್ ಗಳಿಗಿಂತ ನರ್ಮ್ ಬಸ್ ನಲ್ಲಿ ಟಿಕೆಟ್ ದರ ಕಡಿಮೆ. ಸೇವೆಯೂ ಉತ್ತಮ. ನರ್ಮ್ ಬಸ್ ನಿಂದಾಗಿ ಖಾಸಗಿ ಬಸ್ ನವರ ವ್ಯವಹಾರ ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕೆ 'ಲಾಬಿ' ಜನಪ್ರತಿನಿಧಿಗಳ ಮೇಲೆ ಒತ್ತಡ ತರುತ್ತಿದೆ. ಬಡವರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿರುವ ನರ್ಮ್ ಬಸ್ ಉಳಿಸಬೇಕು ಎಂಬುದು ನಾಗರಿಕರ ಆಗ್ರಹ.
Kshetra Samachara
03/12/2021 05:55 pm