ಕಾಪು: ಕಾಪು ತಾಲೂಕಿನ ಹಲವು ಭಾಗಗಳ ಮಲ್ಲಿಗೆ ಕೃಷಿಕರಿಗೆ ಇದೊಂದು ಸಿಹಿ ಸುದ್ದಿ. ಶುಭ ಸಮಾರಂಭಗಳಿಗೆ ಬಳಕೆಯಾಗುವ ಈ ಭಾಗದ ಉಡುಪಿ ಮಲ್ಲಿಗೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಮಲ್ಲಿಗೆ ಕೃಷಿಕರಿಗೆ ಅನುಕೂವಾಗುವಂತೆ ಕ್ಲಸ್ಟರ್ ಮಾದರಿಯಲ್ಲಿ ಬೆಳೆದು, ಅಭಿವೃದ್ಧಿ ಪಡಿಸಲಾಗುತ್ತದೆ.
ಹೌದು ,ಉಡುಪಿ ಮಲ್ಲಿಗೆ ಈಗಾಗಲೇ ಭೌಗೋಳಿಕ ಸೂಚ್ಯಂಕದಡಿ (ಜಿಐ ಟ್ಯಾಗ್) ನೋಂದಣಿಯಾಗಿದೆ.ಈ ಬೆಳೆಯನ್ನು ನರೇಗಾ ಯೋಜನೆಯಡಿ ಕ್ಲಸ್ಟರ್ ಮಾದರಿಯಲ್ಲಿ ಬೆಳೆದು ಅಭಿವೃದ್ಧಿಪಡಿಸುವ ಯೋಜನೆಯಿದು. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಮಲ್ಲಿಗೆ ಬೆಳೆಗೆ ಈಗಾಗಲೇ ಉತ್ತೇಜನ ನೀಡಲಾಗುತ್ತಿದ್ದರೂ ಕೃಷಿಕರು ನಾನಾ ಕಾರಣಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಆದ್ದರಿಂದ ಐದು ಸೆಂಟ್ಸ್ ಜಾಗ ಇದ್ದವರೂ ಮಲ್ಲಿಗೆ ಗಿಡ ಬೆಳೆಯಲು ನರೇಗಾದಡಿ ಅವಕಾಶ ಮಾಡಿಕೊಡಲಾಗುತ್ತಿದೆ. ಜಿಐ ಸ್ಥಾನಮಾನ ಸಿಕ್ಕಿರುವುದರಿಂದ ಮಲ್ಲಿಗೆ ಬೆಳೆಯಲು ಇನ್ನಷ್ಟು ಪ್ರೋತ್ಸಾಹ ಸಿಗಲಿದೆ.
ತೋಟಗಾರಿಕೆ ಇಲಾಖೆ ಜಮೀನಿನಲ್ಲಿ ಅಥವಾ ಲಭ್ಯವಿರುವ ಖಾಸಗಿ ಜಮೀನಿನಲ್ಲಿ ಸುಮಾರು 20- 25 ಎಕರೆ ಪ್ರದೇಶದಲ್ಲಿ ಮಲ್ಲಿಗೆ ಕ್ಲಸ್ಟರ್ ನಿರ್ಮಿಸಲು ಯೋಜನೆ ಸಿದ್ಧಪಡಿ ಸಲಾಗುತ್ತಿದೆ. ಕಾಪು ತಾಲೂಕಿನಲ್ಲೇ ಕ್ಲಸ್ಟರ್ ಮಾಡಲು ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಒಂದೇ ಕಡೆ ಜಮೀನು ಸಿಗದೆ ಇದ್ದಲ್ಲಿ ಐದಾರು ಪಂಚಾಯತ್‌ಗಳನ್ನು ಸೇರಿಸಿ ಮಲ್ಲಿಗೆ ಕ್ಲಸ್ಟರ್ ಮಾಡಲಾಗುತ್ತದೆ. ಯೋಜನೆಗೆ ಸಂಬಂಧಿಸಿ ಶೀಘ್ರ ಸಭೆ ನಡೆಯಲಿದ್ದು, ಮಲ್ಲಿಗೆ ಬೆಳೆಸುವುದು, ನಿರ್ವಹಣೆ ಇತ್ಯಾದಿಯನ್ನು ತೋಟಗಾರಿಕೆ ಇಲಾಖೆಯೇ ಮಾಡಲಿದೆ.
ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
PublicNext
29/03/2022 08:49 pm