ಮುಲ್ಕಿ: ಮುಲ್ಕಿ ನ.ಪಂ.ವ್ಯಾಪ್ತಿಯ ಪೊಲೀಸ್ ಠಾಣೆ ರಸ್ತೆ ಅವ್ಯವಸ್ಥೆ ಆಗರವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಠಾಣೆ ಎದುರು ಭಾಗದಲ್ಲಿರುವ ಈ ರಸ್ತೆ ಹಲವು ವರ್ಷಗಳಿಂದಲೂ ಹೊಂಡಮಯವಾಗಿದೆ. ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ.
ನಿರಂತರ ಜನ, ವಾಹನ ಸಂಚಾರದಿಂದಾಗಿ ಅತಿ ಬಿಝಿ ರಸ್ತೆಯಾಗಿದ್ದು, ಠಾಣೆ ಪಕ್ಕದಲ್ಲಿ ಸಬ್ ರಿಜಿಸ್ಟ್ರರ್ ಆಫೀಸ್, ಶಾಲೆಯಿದೆ. ಮುಲ್ಕಿ ವಿಜಯ ಕಾಲೇಜಿಗೆ ಹೋಗುವ ಪ್ರಮುಖ ರಸ್ತೆಯೂ ಇದಾಗಿದ್ದು,
ಈ ರಸ್ತೆ ಪಕ್ಕದ ವಿದ್ಯುತ್, ದೂರವಾಣಿ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ವರ್ಷದ ಹಿಂದೆ ಮುಲ್ಕಿ ನ.ಪಂ. ವ್ಯಾಪ್ತಿಗೆ ನೂತನ ಕುಡಿಯುವ ನೀರಿನ ಯೋಜನೆಗಾಗಿ ರಸ್ತೆ ಬದಿ ಪೈಪ್ ಜೋಡಣೆಗಾಗಿ ಅಗೆಯುವ ಕಾರ್ಯ ಆರಂಭವಾಗುವಾಗ
ಈ ರಸ್ತೆಯನ್ನು ಕೂಡ ಪೈಪ್ ಲೈನ್ ಕಾಮಗಾರಿ ಗುತ್ತಿಗೆ ದಾರರು ನಾಶ ಮಾಡಿದ್ದಾರೆ ಎಂಬುದು ಸ್ಥಳೀಯರ ಆರೋಪ.
ನ.ಪಂ. ಸದಸ್ಯ ಬಾಲಚಂದ್ರ ಕಾಮತ್ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, ಅವ್ಯವಸ್ಥೆ ಬಗ್ಗೆ ಪರಿಸರವಾಸಿಗಳ ದೂರುಗಳು ಬಂದಿದ್ದು, ಮುಲ್ಕಿ ನ.ಪಂ.ಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ದುರಸ್ತಿ ಮಾಡುವ ಭರವಸೆ ದೊರೆತಿದೆ ಎಂದರು.
Kshetra Samachara
23/12/2020 03:47 pm