ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿ ಮೂಲ ಸೌಕರ್ಯಗಳಿಲ್ಲದೆ ಅವ್ಯವಸ್ಥೆಗಳ ಆಗರವಾಗಿದೆ. ಕಚೇರಿಗೆ ಜಮೀನು ಪರಭಾರೆ ಸಹಿತ ಅನೇಕ ಕೆಲಸಕ್ಕೆ ಬರುವ ನಾಗರಿಕರ ಪಾಡು ಹೇಳತೀರದಾಗಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ಕೆಲಸಕ್ಕೆಂದು ಬರುವ ನಾಗರಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಟ ನಡೆಸಿ ಹೊರಗಡೆ ಮರದಡಿ ಆಶ್ರಯ ಪಡೆಯಬೇಕಾದ ಗತಿ ಬಂದಿದೆ.
ಅದರಲ್ಲೂ ವೃದ್ಧರು ಮತ್ತು ಬಾಣಂತಿಯರ ಪಾಡು ಮತ್ತಷ್ಟು ಶೋಚನೀಯ. ಕಚೇರಿಯಲ್ಲಿ ಕೆಲಸಕ್ಕೆಂದು ಬರುವವರಿಗೆ ಟೋಕನ್ ವಿತರಿಸುತ್ತಿದ್ದು, ಟೋಕನ್ ಪಡೆದು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದೆ.
ಈ ನಡುವೆ ಶೌಚಾಲಯದ ವ್ಯವಸ್ಥೆಯೂ ಸರಿಯಾಗಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಯ ನೌಕರರು ಆದಷ್ಟು ಕರ್ತವ್ಯ ನಿರ್ವಹಿಸುತ್ತಿದ್ದು, ಕಚೇರಿ ಒಳಗೆ ತೀವ್ರ ಇಕ್ಕಟ್ಟಾಗಿರುವ ಕಾರಣ ಜತೆಗೆ ಕೊರೊನಾ ನಿಯಮ ಪಾಲಿಸಲು ಆಗುತ್ತಿಲ್ಲ.
ಕಚೇರಿಯಲ್ಲಿ ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿ, ಪೊಲೀಸ್ ಠಾಣೆ ಪಕ್ಕದಲ್ಲಿದ್ದು, ಸಂಪರ್ಕ ಕಲ್ಪಿಸುವ ರಸ್ತೆಯೂ ಹದಗೆಟ್ಟಿದೆ.
ಈ ಬಗ್ಗೆ ಅನೇಕ ಬಾರಿ ಮುಲ್ಕಿ ನ. ಪಂ. ಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ರಸ್ತೆ ದುರಸ್ತಿ ಆಗಿಲ್ಲ. ದಿನವಿಡೀ ಸಾವಿರಾರು ವಾಹನಗಳು ಓಡಾಡುತ್ತಿರುವ ರಸ್ತೆ, ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಸುವಾಗ ಹಾಳಾಗಿದೆ.
ಕೂಡಲೇ ಸರಕಾರ ಅತಿ ಹೆಚ್ಚು ಆದಾಯವಿರುವ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಮೇಲ್ದರ್ಜೆಗೇರಿಸಿ ಗ್ರಾಹಕರಿಗೆ ಮೂಲ ಸೌಕರ್ಯ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
11/12/2020 03:42 pm