ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿರುವೈಲು, ಪಚ್ಚನಾಡಿ: 2.80 ಕೋಟಿ ರೂ. ಯೋಜನೆಯ 'ಜಲಸಿರಿ' ಗೆ ಶಿಲಾನ್ಯಾಸ

ಮುಲ್ಕಿ: ಮನಪಾ ದ ತಿರುವೈಲು ಮತ್ತು ಪಚ್ಚನಾಡಿ ವಾರ್ಡುಗಳಲ್ಲಿ ಕ್ರಮವಾಗಿ ಎಡಿಬಿ-ಕೆಯುಐಡಿಎಫ್‌ಸಿ-ಜಲಸಿರಿ-24×7 ಕುಡಿಯುವ ನೀರು ಸರಬರಾಜು ಯೋಜನೆಯ 7.5 ಲಕ್ಷ ಲೀಟರ್ ಮತ್ತು 5 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಮೇಲ್ಮಟ್ಟದ ಜಲ ಸಂಗ್ರಹಾಗಾರ ನಿರ್ಮಾಣಕ್ಕೆ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

ತಿರುವೈಲು ವಾರ್ಡಿನ ಅಮೃತನಗರದಲ್ಲಿ ಅಂದಾಜು 1.60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೀರಿನ ಟ್ಯಾಂಕ್‌ನಿಂದ ಅಮೃತನಗರ ಹಾಗೂ ಸುತ್ತಮುತ್ತ ಪ್ರದೇಶಗಳ ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾದರೆ, ಪಚ್ಚನಾಡಿ ಸಂತೋಷನಗರದಲ್ಲಿ ಅಂದಾಜು 1.20 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಟ್ಯಾಂಕ್‌ನಿಂದ ಸ್ಥಳೀಯ ಪ್ರದೇಶಕ್ಕೆ ದಿನದ 24 ತಾಸು ನೀರು ಪೂರೈಕೆಯಾಗಲಿದೆ.

ನಗರದಲ್ಲಿ 28 ಬೃಹತ್ ಜಲಸಿರಿ ನೀರಿನ ಟ್ಯಾಂಕ್

ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 792 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ 48 ವಲಯಗಳಲ್ಲಿ ಇಂತಹ 21 ನೀರಿನ ಟ್ಯಾಂಕ್ ನಿರ್ಮಾಣಗೊಳ್ಳಲಿದೆ. ಯೋಜನೆಗೆ ಸಂಬಂಧಿಸಿ ಸುರತ್ಕಲ್ ಹತ್ತಿರದ ಕೋಡಿಪಾಡಿ ಮತ್ತು ಎನ್‌ಐಟಿಕೆ ಬಳಿ ಎರಡು ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಸುವೇಜ್ ಇಂಡಿಯಾ ಕಂಪೆನಿ ಯೋಜನೆಯ ಗುತ್ತಿಗೆ ಪಡೆದಿದೆ.

ಚುನಾವಣೆಗೆ ಮುಂಚೆ ನೀಡಿರುವ ಭರವಸೆಯಂತೆ ತಾನು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಜಾತಿ, ಮತ ಭೇದ ಮಾಡಲಾರೆ. ಪ್ರಸಕ್ತ ಕೋವಿಡ್ ಸನ್ನಿವೇಶದಲ್ಲೂ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ತಿರುವೈಲು ಹಾಗೂ ಪಚ್ಚನಾಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮೇಯರ್ ದಿವಾಕರ ಪಾಂಡೇಶ್ವರ, ಉಪಮೇಯರ್ ವೇದಾವತಿ, ಕಾರ್ಪೊರೇಟರ್‌ಗಳಾದ ಹೇಮಲತಾ ರಘು ಸಾಲ್ಯಾನ್, ಸಂಗೀತಾ ಆರ್. ನಾಯಕ್, ಉದ್ಯಮಿ ರಘು ಸಾಲ್ಯಾನ್, ಪೌರ ಸಮಿತಿ ಅಧ್ಯಕ್ಷ ವಿಠಲ ಸಾಲ್ಯಾನ್, ಸ್ಟ್ಯಾನಿ ಕುಟಿನ್ಹೋ, ರವೀಂದ್ರ ನಾಯಕ್ ಕುಡುಪು, ಸಂದೀಪ್ ಬೋಂದೆಲ್, ಪೂಜಾ ಪಿ. ಪೈ, ಇಲಾಖಾ ಅಧಿಕಾರಿಗಳು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು. ಕೆಯುಐಡಿಎಫ್‌ಸಿ ಯೋಜನೆ ನಿರ್ದೇಶಕ ಮಂಜುನಾಥಯ್ಯ ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

28/11/2020 12:43 pm

Cinque Terre

5.61 K

Cinque Terre

0