ಮುಲ್ಕಿ: ರಾ.ಹೆ. 66ರ ಮಂಗಳೂರು-ಉಡುಪಿ ಮಧ್ಯೆ ಸಿಗುವ ಹಳೆಯಂಗಡಿ ಹೆದ್ದಾರಿ ಇಕ್ಕೆಲ ಅವ್ಯವಸ್ಥೆ ಆಗರವಾಗಿದೆ. ಹಳೆಯಂಗಡಿ ಜಂಕ್ಷನ್ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿ ಮಳೆನೀರು ನಿಂತು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿಯಿದೆ.
ಕಿನ್ನಿಗೋಳಿ-ಕಟೀಲು, ಮೂಡಬಿದ್ರೆ ಹಳೆಯಂಗಡಿ ಪೇಟೆ ಒಳಗಡೆ ಹಾಗೂ ರಾ. ಹೆ.ಯಲ್ಲಿ ವಾಹನ ಭಾರಿ ಸಂಖ್ಯೆಯಲ್ಲಿ ಓಡಾಡುತ್ತಿದ್ದರೂ ಹೆದ್ದಾರಿ ಇಲಾಖೆ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವಹಿಸಿರುವ ಗುತ್ತಿಗೆದಾರರಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.
ಹೆದ್ದಾರಿ ಬದಿ ತ್ಯಾಜ್ಯ ರಾಶಿ ಹಳೆಯಂಗಡಿ ರಾ.ಹೆ. ಬದಿ ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿ ದುಷ್ಕರ್ಮಿಗಳು ಕಸ ಎಸೆದು ಪರಾರಿಯಾಗುತ್ತಿದ್ದು, ಮಳೆಗೆ ಕಸ ಕೊಳೆತು ದುರ್ವಾಸನೆ ಬೀರುತ್ತಿದೆ.
ಕಸ ತೆರವುಗೊಳಿಸುವ ಬಗ್ಗೆ ಅನೇಕ ಬಾರಿ ಹಳೆಯಂಗಡಿ ಪಂಚಾಯತಿಗೆ ತಿಳಿಸಿದ್ದರೂ ಇದುವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೆದ್ದಾರಿಯ ಎರಡು ಬದಿ ತ್ಯಾಜ್ಯ ರಾಶಿ ಕಂಡು ಬರುತ್ತಿದ್ದು, ಪ್ರಾಣಿಗಳು ಕೊಳೆತ ತ್ಯಾಜ್ಯ ತಿನ್ನುತ್ತಿದೆ. ಕೊರೊನಾ ಸಂಕಷ್ಟದ ದಿನಗಳಲ್ಲಿಯೂ ಸ್ವಚ್ಛತೆ ಬಗ್ಗೆ ಗಮನ ಹರಿಸದೆ ತ್ಯಾಜ್ಯ ಬಿಸಾಡುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
22/09/2020 07:54 pm