ಮುಲ್ಕಿ: ಮುಲ್ಕಿ ನ.ಪಂ. ವ್ಯಾಪ್ತಿಯ ಪಡುಬೈಲು- ಕೊಳಚಿಕಂಬಳ ಬೀಚ್ ರಸ್ತೆ ತೀವ್ರ ಕೆಟ್ಟು ಹೋಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮುಲ್ಕಿ ಕ್ಷೀರಸಾಗರದ ಬಳಿಯಿಂದ ಕೊಳಚಿಕಂಬಳ ಬೀಚ್ ರಸ್ತೆಯಂತೂ ತೀರಾ ಹದಗೆಟ್ಟು ಹೋಗಿದ್ದು, ಹೊಂಡ ಮಯವಾಗಿದೆ. ಪಡುಬೈಲು ಶ್ರೀ ಕೋರ್ದಬ್ಬು ದೈವಸ್ಥಾನದ ಬಳಿ ಭಾರಿ ಗಾತ್ರದ ಹೊಂಡ ಉಂಟಾಗಿದ್ದು, ರಾತ್ರಿ ಹೊತ್ತು ಬೀಚ್ ಗೆ ಹೋಗಿ ಹಿಂತಿರುಗುವ ವಾಹನಗಳು ಹೊಂಡಕ್ಕೆ ಬಿದ್ದು ಅನೇಕ ಅಪಘಾತಗಳು ಸಂಭವಿಸಿದೆ.
ಮುಲ್ಕಿ ಪ್ರಧಾನ ಮಾರುಕಟ್ಟೆಯಿಂದ ಕೊಳಚಿಕಂಬಳ ಬೀಚ್ ರಸ್ತೆ ಇಕ್ಕೆಲದಲ್ಲಿ ಬೃಹತ್ ಗಾತ್ರದಲ್ಲಿ ಹುಲ್ಲು ಬೆಳೆದಿದೆ. ಕೆಲವೆಡೆ ಕುಡಿಯುವ ನೀರಿನ ಪೈಪ್ ಹಾಕಲು ರಸ್ತೆ ಅಗೆದು ಅರ್ಧಂಬರ್ಧ ಕಾಮಗಾರಿ ನಡೆಸಲಾಗಿದೆ. ಈ ಬಗ್ಗೆ ಮುಲ್ಕಿ ನ.ಪಂ. ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ, ರಸ್ತೆ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದಿದ್ದು, ರಸ್ತೆ ಇಕ್ಕೆಲದ ಹುಲ್ಲು ಕಟಾವು ಮಾಡಿ ಶೀಘ್ರ ದುರಸ್ತಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮುಲ್ಕಿ ಪ್ರಧಾನ ಕೊಳಚಿಕಂಬಳ ಬೀಚ್ ಪ್ರದೇಶಕ್ಕೆ ಅನೇಕ ಪ್ರವಾಸಿಗರು ಬರುತ್ತಿದ್ದು, ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಬೀಚ್ ಪರಿಸರದಲ್ಲಿ ಮದ್ಯವ್ಯಸನಿಗಳ ಹಾಗೂ ಯುವ ಜೋಡಿಗಳ ಕಾಟ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಅನೇಕ ಬಾರಿ ಸಣ್ಣಪುಟ್ಟ ಗಲಾಟೆ ಕೂಡ ನಡೆದಿದೆ. ಕೂಡಲೇ ಮುಲ್ಕಿ ಪೊಲೀಸರು ಕೊಳಚಿಕಂಬಳದ ಪ್ರದೇಶಕ್ಕೆ ಸೂಕ್ತ ಬಂದೋಬಸ್ತ್ ನಡೆಸಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
30/10/2020 09:56 pm