ಮುಲ್ಕಿ: ಮುಲ್ಕಿ ನಗರ ವ್ಯಾಪ್ತಿಯಲ್ಲಿ ಕಳೆದ ಕೆಲದಿನಗಳಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕಾಡುತ್ತಿದ್ದು ಗ್ರಾಹಕರು ನೆಟ್ವರ್ಕ್ ಕಂಪನಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಜಿಯೋ ನೆಟ್ವರ್ಕ್ ಅಂತೂ ಸಂಪೂರ್ಣವಾಗಿ ಕೆಟ್ಟುಹೋಗಿದ್ದು, ಮುಲ್ಕಿ ಪಟ್ಟಣ ಪ್ರದೇಶದಲ್ಲಿ ಪೂರ್ಣ ಸ್ಥಗಿತಗೊಂಡಿದೆ. ನೆಟ್ವರ್ಕ್ ಅವ್ಯವಸ್ಥೆ ಬಗ್ಗೆ ಜಿಯೋ ಕಂಪನಿಗೆ ಫೋನ್ ಮಾಡಿದರೆ ಸರಿಯಾದ ಉತ್ತರ ದೊರಕುತ್ತಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಲ್ಕಿಯಲ್ಲಿ ಈಗಾಗಲೇ ಬಿಎಸ್ಎನ್ಎಲ್ ನೆಟ್ವರ್ಕ್ ಸಂಪೂರ್ಣವಾಗಿ ಕೊನೆಯಾಗುತ್ತ ಬಂದಿದ್ದು, ಪರ್ಯಾಯವಾಗಿ ಗ್ರಾಹಕರು ಜಿಯೋ ನೆಟ್ವರ್ಕ್ ಅವಲಂಬಿಸಿದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಮುಲ್ಕಿಯಲ್ಲಿ ಅನೇಕ ಗ್ರಾಹಕರು ಮೊಬೈಲ್ ನೆಟ್ವರ್ಕ್ ಅವ್ಯವಸ್ಥೆ ಬಗ್ಗೆ ಮೊಬೈಲ್ ಅಂಗಡಿಗಳಿಗೆ ಹೋಗಿ ಅಂಗಡಿಯ ಮಾಲೀಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಂಗಡಿ ಮಾಲೀಕರು ದೂರಿದ್ದಾರೆ. ಕಳೆದ ಕೆಲದಿನಗಳಿಂದ ಜಿಯೋ ನೆಟ್ವರ್ಕ್ ಸಹಿತ ಬೇರೆ ಕಂಪನಿಗಳ ಮೊಬೈಲ್ ತರಂಗಾಂತರ ಹಾಗೂ ಇಂಟರ್ನೆಟ್ ನಲ್ಲಿ ಭಾರೀ ಸಮಸ್ಯೆ ಕಂಡುಬರುತ್ತಿದ್ದರೂ ಕಂಪನಿಗಳು ಚಕಾರವೆತ್ತುತ್ತಿಲ್ಲ. ಒಂದೆಡೆ ಲಾಕ್ ಡೌನ್ ಬಳಿಕ ವ್ಯಾಪಾರ, ವ್ಯವಹಾರ ಅಲ್ಲೋಲಕಲ್ಲೋಲವಾಗಿದ್ದು ಮನೆಯಲ್ಲಿ ಕುಳಿತು ನೆಟ್ವರ್ಕ್ ಮೂಲಕ ಕೆಲಸ ಮಾಡುತ್ತಿರುವವರಿಗೆ ಹಾಗೂ ನೆಟ್ವರ್ಕ್ ಮೂಲಕ ಕಲಿಕೆಯ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿದ್ದು ಜಿಯೋ ನೆಟ್ವರ್ಕ್ ಸಹಿತ ಇತರ ಕಂಪನಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಜಿಯೋ ನೆಟ್ವರ್ಕ್ ಕಂಪನಿ ತರಂಗಾಂತರ ಸರಿಪಡಿಸಬೇಕು ಇಲ್ಲದಿದ್ದರೆ ಕಂಪೆನಿಯನ್ನೇ ಬಹಿಷ್ಕರಿಸಬೇಕಾದೀತು ಎಂದು ಗ್ರಾಹಕರೇ ಎಚ್ಚರಿಕೆ ನೀಡಿದ್ದಾರೆ.
Kshetra Samachara
29/10/2020 07:27 pm