ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಲ್ಲಾಪು ಕಿರು ಸೇತುವೆ ಕಳೆದ ಅಕ್ಟೋಬರ್ 16ರಂದು ಕುಸಿತಕಂಡಿದ್ದು ಪುನರ್ ನಿರ್ಮಾಣದ ಕಾರ್ಯ ನಿಧಾನಗತಿಯಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಲ್ಲಾಪು ಕಿರು ಸೇತುವೆ ಕುಸಿತ ಕಂಡಿದ್ದರಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದು ಪಡುಪಂಣಂಬೂರಿ ನಿಂದ ತೋಕೂರು ಕಿನ್ನಿಗೋಳಿ,ಕಟೀಲು, ಮೂಡಬಿದ್ರೆ ಕಡೆಗೆ ಹೋಗುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಿರು ಸೇತುವೆ ಅಕ್ಟೋಬರ್ 16ರಂದು ಕುಸಿತ ಕಂಡಿದ್ದರೂ ದುರಸ್ತಿ ಕಾರ್ಯ ಸೋಮವಾರದಿಂದ(ಅಕ್ಟೋಬರ್ 26) ಶುರುವಾಗಿದ್ದು ಕುಸಿತವಾದ ರಸ್ತೆಯನ್ನು ಅಗೆದು ಚಲ್ಲಾಪಿಲ್ಲಿ ಮಾಡಿ ಹಾಗೆಯೇ ಬಿಟ್ಟು ಹೋಗಿದ್ದಾರೆ.
ರಸ್ತೆಯನ್ನು ಅಗೆಯುವ ರಭಸದಲ್ಲಿ ಪಂಚಾಯಿತಿಯ ಕುಡಿಯುವ ನೀರಿನ ಪೈಪಿಗೆ ಹಾನಿ ಮಾಡಿದ್ದು ಕಳೆದ ಕೆಲದಿನಗಳಿಂದ ಸ್ಥಳೀಯ ಸುಮಾರು 75 ಕುಟುಂಬಗಳಿಗೆ ಕುಡಿಯುವ ನೀರಿನ ಅವ್ಯವಸ್ಥೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇತುವೆ ಬದಿಯಲ್ಲಿ ನಡೆದುಕೊಂಡು ತೋಕೂರು ಕಡೆಗೆ ಹೋಗಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಅರ್ಧಂಬರ್ಧ ಕಾಮಗಾರಿಯಿಂದ ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ ಎಂದು ಸ್ಥಳೀಯರು ಹೇಳಿದ್ದು ಈ ಬಗ್ಗೆ ಪಂಚಾಯತ್ ಗೆ ತಿಳಿಸಿದ್ದರೂ ಪಂಚಾಯಿತಿ ಅಧಿಕಾರಿ ಸೂಕ್ತ ಗಮನ ಹರಿಸಿಲ್ಲ ಎಂದು ಆರೋಪಿಸಿದ್ದಾರೆ.
ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಲ್ಲಾಪು ಕಿರು ಸೇತುವೆ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದ್ದು ಆರಂಭ ಶೂರತನ ಅರ್ಧದಲ್ಲಿಯೇ ಬಿಟ್ಟು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರಾದ ಧರ್ಮಾನಂದ ತೋಕೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಮೂಲಗಳ ಪ್ರಕಾರ ಕಿರು ಸೇತುವೆ ಕಾಮಗಾರಿಗೆ ಸ್ಥಳೀಯ ಶಾಸಕರು ಹೇಳಿದಂತೆ 10ಲಕ್ಷ ಇದುವರೆಗೂ ಮಂಜೂರಾಗಿಲ್ಲ ಮುಂಗಡ ಕೆಲಸ ಮಾಡುತ್ತಿದ್ದು ಇದರಿಂದಲೇ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
Kshetra Samachara
28/10/2020 02:53 pm