ಮುಲ್ಕಿ: ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಪಡುಪಣಂಬೂರು ತೋಕೂರು ಕಿನ್ನಿಗೋಳಿ ಲೋಕೋಪಯೋಗಿ ರಸ್ತೆಯ ಕಲ್ಲಾಪು ರೈಲ್ವೇ ಕ್ರಾಸಿಂಗ್ ಬಳಿ ರಸ್ತೆ ಏಕಾಏಕಿ ಕುಸಿದಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಹಲವು ವರ್ಷಗಳ ಹಿಂದೆ ಪಡುಪಣಂಬೂರು ತೋಕೂರು ಕಿನ್ನಿಗೋಳಿ ರಸ್ತೆ ಸಂಪರ್ಕ ರಸ್ತೆಯ ಕಲ್ಲಾಪು ಬಳಿ ಸೇತುವೆ ಕುಸಿದಿದ್ದು ಸ್ಥಳೀಯರು ಎಚ್ಚರಿಕೆ ಬ್ಯಾನರ್ ಅಳವಡಿಸಿದ್ದರು.
ಅಲ್ಲದೆ, ಅಪಾಯದಲ್ಲಿರುವ ಸೇತುವೆ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ತೋಕೂರು ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸಿದ್ದು ಬಳಿಕ 'ಪಬ್ಲಿಕ್ ನೆಕ್ಸ್ಟ್' ಜಾಗೃತಾ ವರದಿಯನ್ನೂ ಪ್ರಕಟಿಸಿತ್ತು.
ಶುಕ್ರವಾರ ಬೆಳಿಗ್ಗೆ ಕಿರುಸೇತುವೆ ನಡುವೆ ದೊಡ್ಡ ರಂಧ್ರ ಉಂಟಾಗಿ ಕುಸಿಯಲಾರಂಭಿಸಿದೆ. ಕೂಡಲೇ ಸ್ಥಳೀಯರು ಪಡುಪಣಂಬೂರು ಪಂ. ಗಮನಕ್ಕೆ ತಂದಿದ್ದು ಪಿಡಿಒ ಅನಿತಾ ಕ್ಯಾಥರಿನ್, ಜಿಪಂ ಸದಸ್ಯ ವಿನೋದ್ ಬೊಳ್ಳೂರು ಅಪಾಯದಲ್ಲಿರುವ ಕಿರು ಸೇತುವೆ ಪರಿಶೀಲಿಸಿದ್ದಾರೆ ಹಾಗೂ ಎರಡು ಕಡೆ ಬ್ಯಾರಿಕೇಡ್ ಮೂಲಕ ರಸ್ತೆತಡೆ ಮಾಡಲಾಗಿದೆ.
ರಸ್ತೆ ಕುಸಿತದ ನಡುವೆಯೂ ಮಧ್ಯಾಹ್ನ ಪ್ರಯಾಣಿಕರಿದ್ದ ಬಸ್ಸೊಂದು ಸಂಚರಿಸಿದೆ ಎಂದು ಸ್ಥಳೀಯರು ಆತಂಕಿತರಾಗಿ ಹೇಳಿದ್ದಾರೆ. ರಸ್ತೆ ತಡೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು ಪಡುಪಣಂಬೂರು ನಿಂದ ತೋಕೂರು, ಕಿನ್ನಿಗೋಳಿ, ಕಟೀಲು ಕಡೆಗೆ ಸಂಚರಿಸುವ ಪ್ರಯಾಣಿಕರು ಸುತ್ತು ಬಳಸಿ ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದಿದೆ.
ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ತೋಕೂರು ಮಾತನಾಡಿ, ಅನಾಹುತ ನಡೆಯುವ ಮೊದಲೇ ಶೀಘ್ರ ನೂತನ ಸೇತುವೆ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಸೇತುವೆ ಅವ್ಯವಸ್ಥೆ ಬಗ್ಗೆ ಕಳೆದ ತಿಂಗಳು ಎಚ್ಚರಿಸಿದ "ಪಬ್ಲಿಕ್ ನೆಕ್ಸ್ಟ್ ವರದಿ ನಿಜವಾಗಿದೆ ಎಂದ ಅವರು, ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆ ಆಡಳಿತದ ವೈಫಲ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಪಂ ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ, ಕಲ್ಲಾಪು ಬಳಿ ನೂತನ ಕಿರುಸೇತುವೆ ಕಾಮಗಾರಿಗೆ ಶಾಸಕರು 10 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದು ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
Kshetra Samachara
16/10/2020 05:15 pm