ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ರೈಲ್ವೆ ನಿಲ್ದಾಣದಲ್ಲಿ ಪುತ್ರಿಯನ್ನು ಕಳೆದುಕೊಂಡ ತಾಯಿಯ ಕರುಣಾಜನಕ ಕಥೆಯಿದು. ಮಗಳನ್ನು ಹುಡುಕಾಡಲು ಮನೆ ತೊರೆದು ರಾಜ್ಯ ರಾಜ್ಯಗಳನ್ನು ಸುತ್ತಿದ ಆ ತಾಯಿಗೆ ಆಶ್ರಯವಿತ್ತದ್ದು ಮಂಗಳೂರಿನ ವೈಟ್ ಡೌಸ್ ಸಂಸ್ಥೆಯ ಕೊರಿನ್ ರಸ್ಕಿನ್ ಎಂಬ ಮಮತಾಮಯಿ. ಇಂದು ಅವರು ಆ ತಾಯಿಯನ್ನು ಆಕೆಯ ಕುಟುಂಬದೊಂದಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು... ಮಧ್ಯಪ್ರದೇಶ ರಾಜ್ಯದ ಸಜಾಪುರದ ನಬೀಸಾ ಎಂಬ ನತದೃಷ್ಟ ತಾಯಿಯ ಕಥೆಯಿದು. ದೂರದ ಗುಜರಾತ್ ನಲ್ಲಿರುವ ಯುವಕನೊಂದಿಗೆ ವಿವಾಹವಾಯಿತು. ಎರಡು ಮಕ್ಕಳೂ ಆಯಿತು. ಆದರೆ ದಾಂಪತ್ಯ ವಿರಸದಿಂದ ಎರಡು ವರ್ಷದ ಪುಟ್ಟ ಮಗಳೊಂದಿಗೆ ನಬೀಸಾ ಮನೆ ಬಿಡುತ್ತಾಳೆ. ಅಲ್ಲಿಂದ ತವರು ಮನೆಯ ದಾರಿ ಹಿಡಿಯಲು ರೈಲು ನಿಲ್ದಾಣಕ್ಕೆ ಬರುತ್ತಾಳೆ. ರೈಲು ನಿಲ್ದಾಣದಲ್ಲಿ ಅಪರಿಚಿತೆಯೊಬ್ಬಳು ಈಕೆಯ ಪುತ್ರಿಯನ್ನು ಅಪಹರಿಸುತ್ತಾಳೆ. ತನ್ನ ಕರುಳಕುಡಿಯನ್ನು ಹುಡುಕಾಡುತ್ತಾ ರೈಲಿನಲ್ಲಿಯೇ ವಿವಿಧ ರಾಜ್ಯಗಳಿಗೆ ಹೋಗಿ ಹುಡುಕಾಡುತ್ತಾಳೆ.
ಹೀಗೆ ಹೋದ ನಬೀಸಾ ಕೇರಳ ರಾಜ್ಯದಲ್ಲಿ ಪತ್ತೆಯಾಗಿ ಅಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಆಕೆಯನ್ನು ತವರು ಮನೆಗೆ ಸೇರಿಸಲು ಯಶಸ್ವಿಯಾಗುತ್ತಾರೆ. ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ ನಬೀಸಾ ಮತ್ತೆ ಮನೆ ತೊರೆದು ಪುತ್ರಿಯನ್ನು ಹುಡುಕಿಕೊಂಡು ರೈಲನ್ನೇರುತ್ತಾಳೆ. ಹಾಗೆ ಬಂದ ನಬೀಸಾ 2019ಕ್ಕೆ ಮಂಗಳೂರಿನ ಕಂಕನಾಡಿಯಲ್ಲಿ ಪತ್ತೆಯಾಗುತ್ತಾಳೆ. ಕೆಲ ದಿನಗಳಿಂದ ಅಲ್ಲಿಯೇ ಅಲೆದಾಡುತ್ತಿದ್ದ ನಬೀಸಾಳಿಗೆ ವೈಟ್ ಡೌಸ್ ಸಂಸ್ಥೆ ಆಶ್ರಯ ನೀಡುತ್ತದೆ. ಅಲ್ಲದೆ ಅಲ್ಲಿ ಆಕೆಗೆ ವೈದ್ಯಕೀಯ ಚಿಕಿತ್ಸೆ ನೀಡಿದ ಪರಿಣಾಮ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಇದೀಗ ಆಕೆಯನ್ನು ಮತ್ತೆ ಕುಟುಂಬದೊಂದಿಗೆ ಸೇರಿಸುವ ಕಾರ್ಯವನ್ನೂ ಮಾಡಿದೆ.
ಇಂದು ನಬೀಸಾ ತನ್ನ ತಂದೆ ವಾಸಿಂ ಖಾನ್ ರೊಂದಿಗೆ ಮಧ್ಯಪ್ರದೇಶ ರಾಜ್ಯಕ್ಕೆ ಹೋಗಲು ರೈಲು ಹತ್ತಿದ್ದಾಳೆ. ಆದರೂ ಪುತ್ರಿಯನ್ನು ಕಳೆದುಕೊಂಡ ಕೊರಗು ಇನ್ನೂ ಆಕೆಯಲ್ಲಿದೆ. ಪುತ್ರಿಯನ್ನು ನೆನೆದು ಪದೇ ಪದೇ ಕಣ್ಣೀರಾಗುವ ಈ ತಾಯಿ ಮತ್ತು ಆ ಮಗಳು ಶೀಘ್ರವೇ ಒಂದಾಗಲೆಂಬುದೇ ಪಬ್ಲಿಕ್ ನೆಕ್ಸ್ಟ್ ನ ಸದಾಶಯ.
ವಿಶ್ವನಾಥ ಪಂಜಿಮೊಗರು, ಪಬ್ಲಿಕ್ ನೆಕ್ಸ್ಟ್, ಮಂಗಳೂರು
PublicNext
08/09/2022 09:10 pm