ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಸೂತ್ರಧಾರ ಹಾಗೂ ಅರ್ಥಧಾರಿ, ಹಿರಿಯ ಗೊಂಬೆಯಾಟ ಕಲಾವಿದ ಹೆಮ್ಮಾಡಿ ಹೇಮಾಪುರ ನಿವಾಸಿ ನಾರಾಯಣ ಬಿಲ್ಲವ (63) ಅನಾರೋಗ್ಯದಿಂದ ಸೋಮವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಾರಾಯಣ ಬಿಲ್ಲವ ಅವರು ಕಳೆದ 43 ವರ್ಷದಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಖಾಯಂ ಕಲಾವಿದರಾಗಿದ್ದು, ವಿದೇಶದಲ್ಲಿ ನಡೆದ ಗೊಂಬೆಯಾಟ ಪ್ರದರ್ಶನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅರ್ಥ ಹೇಳುತ್ತಿದ್ದರು. ಕನ್ನಡ, ಕೊಂಕಣಿ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಹಿಡಿತ ಹೊಂದಿದ್ದ ಅವರು ಗೊಂಬೆಯಾಟದ ಸೂತ್ರಧಾರಿ ಹಾಗೂ ಅರ್ಥಧಾರಿಯಾಗಿ ಜನ ಮಾನಸದಲ್ಲಿ ನೆಲೆಯೂರಿದ್ದರು.
ಉಪ್ಪಿನಕುದ್ರು ಗೊಂಬೆಯಾಟದ ಸಂಸ್ಥಾಪಕ ಕೊಗ್ಗ ದೇವಣ್ಣ ಕಾಮತ್ ಅವರ ಒಡನಾಡಿಯಾಗಿದ್ದು, ಅವರೊಟ್ಟಿಗೂ ತಿರುಗಾಟ ಮಾಡಿದ್ದ ಅವರು, ಮುಂದೆ ಕೊಗ್ಗ ಕಾಮತ್ ಅವರ ಪುತ್ರ ಭಾಸ್ಕರ ಕೊಗ್ಗ ಕಾಮತ್ ಜೊತೆ ಕಲಾವಿದರಾಗಿ ಮುಂದುವರಿದಿದ್ದರು.
ಓದಿದ್ದು ಸ್ವಲ್ಪವಾದರೂ ಇಂಗ್ಲಿಷ್, ಹಿಂದಿ ಭಾಷೆಯ ಮೇಲಿನ ಅವರ ಹಿಡಿತ ನಿಜಕ್ಕೂ ಅದ್ಭುತವಾಗಿತ್ತು. ಕೊಂಕಣಿ ಭಾಷೆ ನಿರರ್ಗಳವಾಗಿ ಹರಿದು ಬರುತ್ತಿತ್ತು. ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಮೃತರು ಪತ್ನಿ, ಕುಟುಂಬಿಕರನ್ನು ಅಗಲಿದ್ದಾರೆ. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಹಾಗೂ ಸಹ ಕಲಾವಿದರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
Kshetra Samachara
30/08/2022 10:27 am