ಕಾರ್ಕಳ: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ತುಂಬಿದ್ದು, ಅಂದು 1943ರ ಆಗಸ್ಟ್ 8ರಂದು ನಡೆದ ಕ್ವಿಟ್ ಇಂಡಿಯಾ ಚಳುವಳಿಗೆ ಇಂದು ಬರೋಬ್ಬರಿ 80 ವರ್ಷಗಳು ತುಂಬಿವೆ. ಅಂದಿನ ಕ್ವಿಟ್ ಇಂಡಿಯಾ ಚಳುವಳಿ ಭಾಗವಾಗಿ ಕಾರ್ಕಳದಲ್ಲಿ ನಡೆದ ಚಳುವಳಿಯಲ್ಲಿ 18ರ ಚಿಗುರು ಮೀಸೆಯ ಯುವಕನೋರ್ವ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಊದಿಸಿ ಬ್ರಿಟಿಷರಿಂದ ಬಂಧಿತನಾಗಿ ಬಳ್ಳಾರಿ ಜೈಲು ಸೇರಿದ್ದ. 80 ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರ್ಕಳದ ಆ ಯುವಕನಿಗೆ ಇದೀಗ 98ರ ಇಳಿ ಹರೆಯ. ಅಂತಹ ಹಿರಿಯ ಸ್ವಾತಂತ್ರ್ಯ ಸೇನಾನಿಯನ್ನು ಗುರುತಿಸಿದ ಉಡುಪಿ ಜಿಲ್ಲಾಡಳಿತ ಅವರು ಪ್ರಸ್ತುತ ವಾಸವಿರುವ ಬೆಂಗಳೂರಿಗೆ ಹೋಗಿ ಸಕಲ ಸರಕಾರಿ ಗೌರವಗಳನ್ನು ನೀಡಿ ಸನ್ಮಾನಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವಿಸಿದೆ.
ಕಾರ್ಕಳ ಪಾಂಡುರಂಗ ಕಾಮತ್ ಹಾಗೂ ಶಾರದಾ ಕಾಮತ್ ದಂಪತಿಯ 2ನೇ ಪುತ್ರರಾಗಿ 1924 ಆಗಸ್ಟ್ 24ರಂದು ಶ್ರೀನಿವಾಸ ಕಾಮತರ ಜನನವಾಯಿತು. ಬಾಲ್ಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು ಪ್ರೌಢ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟವೂ ತೀವ್ರಗೊಂಡಿತ್ತು. ಕಾಲೇಜು ಶಿಕ್ಷಣದ ಜತೆಗೆ 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯೂ ಬಿರುಸುಗೊಂಡಿತ್ತು. ದೇಶವನ್ನು ಹೇಗಾದರೂ ಮಾಡಿ ಬ್ರಿಟಿಷರಿಂದ ಸ್ವಾತಂತ್ರ್ಯಗೊಳಿಸಲೇಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟಕ್ಕೆ ಧುಮುಕ್ಕಿದ್ದರು. ಕಾಮತರೊಂದಿಗೆ ಅವರ ಸೋದರ ಸಂಬಂಧಿಗಳಾದ ನರಸಿಂಹ ಕಾಮತ್, ಕೃಷ್ಣ ಕಾಮತರು ಕೂಡ ಅಂದಿನ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು.
ಹೋರಾಟದಿಂದ 6 ತಿಂಗಳ ಜೈಲುವಾಸ ಅನುಭವಿಸಿ ಸನ್ನಡತೆಯ ಆಧಾರದಲ್ಲಿ ಹೊರಬಂದ ಶ್ರೀನಿವಾಸ ಕಾಮತರು ಮತ್ತೆ ಮಂಗಳೂರಿನಲ್ಲಿ ಬಿಎ ಪದವಿ ಪಡೆದು ತದನಂತರ ಬಿಎಡ್ ಮುಗಿಸಿ ಕಾರ್ಕಳದ ಬೋರ್ಡ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಮುಖ್ಯ ಶಿಕ್ಷಕರಾಗಿ 1970ರಲ್ಲಿ ನಿವೃತ್ತರಾಗಿದ್ದರು. ಪತ್ನಿಯ ನಿಧನದ ಹಿನ್ನಲೆಯಲ್ಲಿ ಕಾರ್ಕಳದಿಂದ ತನ್ನ ಪುತ್ರಿ ಡಾ. ಶೋಭಾ ಕಾಮತ್ ಅವರ ಜತೆ ಬೆಂಗಳೂರಿನ ಕೋರಮಂಗಲದಲ್ಲಿ ವಾಸವಿದ್ದಾರೆ.
ಇಂತಹ ಅಪೂರ್ವ ಹೋರಾಟಗಾರ ಸ್ವಾತಂತ್ರ್ಯ ಅಮೃತಮಹೋತ್ಸವದ ಸಡಗರದಲ್ಲಿ ನಮ್ಮೊಂದಿಗೆ ಇರುವುದೇ ಅತ್ಯಂತ ಖುಷಿಯ ವಿಚಾರ.
Kshetra Samachara
14/08/2022 08:26 pm