ಮಂಗಳೂರು: ಇವಳದ್ದು ಏಕಾಂಗಿ ಪಯಣ... ಬರೋಬ್ಬರಿ 3 ತಿಂಗಳ ಕಾಲ ಈಶಾನ್ಯ ಭಾರತ ಭಾಗಗಳಲ್ಲಿ 22ಸಾವಿರ ಕಿ.ಮೀ. ದೂರ ಬೈಕ್ ಸಂಚಾರ. ಚೀನಾ, ಬರ್ಮಾ, ಬಾಂಗ್ಲಾ, ನೇಪಾಳ ಗಡಿ ಭಾಗಗಳಲ್ಲೂ ಸಂಚಾರ ಮುಗಿಸಿದ ಈಕೆಯ ತಿರಂಗಾ ಯಾತ್ರಾ ಅಭಿಯಾನದ ಏಕಾಂಗಿ ಬೈಕ್ ಸಂಚಾರ ಇಂದು ಮಂಗಳೂರು ತಲುಪಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆಯ ಅಮೃತಾ ಜೋಶಿ ಈಶಾನ್ಯ ಭಾರತ ಭಾಗಗಳಲ್ಲಿ ಏಕಾಂಗಿಯಾಗಿ ಬೈಕ್ ಸಂಚಾರ ಮಾಡಿ ಇಂದು ತಾನು ವ್ಯಾಸಂಗ ಮಾಡಿದ ಮಂಗಳೂರಿನ ಕೆನರಾ ಹೈಸ್ಕೂಲ್ ಗೆ ಆಗಮಿಸಿದ್ದಾಳೆ. ತನ್ನ ತಂದೆಯ ಇಚ್ಛೆಯಂತೆ ಬೈಕ್ ರೈಡ್ ಮಾಡುವುದನ್ನು ಅಭ್ಯಾಸ ಮಾಡಿರುವ 21 ವರ್ಷದ ಅಮೃತಾ ಜೋಶಿ ಎಲ್ಲರೂ ಬೆರಗುಗೊಳ್ಳುವಂತಹ ಸಾಧನೆ ಮಾಡಿದ್ದಾಳೆ. ಫೆಬ್ರವರಿ 4ರಂದು ಕೇರಳದ ಕಲ್ಲಿಕೋಟೆಯಿಂದ ಬೈಕ್ ಸಂಚಾರ ಆರಂಭಿಸಿ ತಮಿಳುನಾಡು, ಆಂಧ್ರಪ್ರದೇಶ ಮೂಲಕ ಈಶಾನ್ಯ ಭಾರತ ಪೂರ್ತಿ ಸಂಚರಿಸಿ ಚೀನಾ, ನೇಪಾಳ, ಬರ್ಮಾ, ಬಾಂಗ್ಲಾ ಗಡಿ ಭಾಗಗಳಲ್ಲೂ ಸಂಚರಿಸಿದ್ದಾಳೆ.
ಆದರೆ ಅಲ್ಲಿಂದ ಮರಳಿ ಬರುತ್ತಿರುವ ವೇಳೆ ಈಕೆಯ ಕೆಟಿಎಂ ಬೈಕ್ ಅಪಘಾತವಾಗಿ ಸಂಪೂರ್ಣ ನುಜ್ಜುಗುಜ್ಜಾಯಿತು. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಗಾಯಗೊಂಡ ಅಮೃತಾ ಜೋಶಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದು ಎಲ್ಲಿ ಅಪಘಾತವಾಗಿದೆಯೋ ಅದೇ ಸ್ಥಳದಿಂದ ಮತ್ತೆ ತಮ್ಮ ಪ್ರಯಾಣ ಬೆಳೆಸಿದ್ರು.. ಆಗ ತಮ್ಮ ಭಾವೀ ಪತಿಯ ಬಿಎಂಡಬ್ಲ್ಯು ಬೈಕ್ ನಲ್ಲಿ ಲಡಾಕ್, ಪಂಜಾಬ್, ರಾಜಸ್ಥಾನ ಮುಗಿಸಿ ಕರ್ನಾಟಕ ಪ್ರವೇಶಿಸಿ ಇಂದು ಮಂಗಳೂರು ತಲುಪಿದ್ದಾರೆ. ಇಂದೇ ಅವರು ಕೇರಳಕ್ಕೆ ತೆರಳಿ ಅಲ್ಲಿ ಏಕಾಂಗಿ ಬೈಕ್ ಪ್ರಯಾಣಕ್ಕೆ ಅಂತ್ಯ ಹಾಡುತ್ತಾರೆ.
ಪ್ರಾದೇಶಿಕ ಸಮಾನತೆ ಹಾಗೂ ಸೈನಿಕರಿಗೆ ಗೌರವ ಕೊಡುವ ಉದ್ದೇಶದಿಂದ ಅಮೃತಾ ಜೋಶಿ ತಿರಂಗಾ ಯಾತ್ರಾ ಅಭಿಯಾನ ಕೈಗೊಂಡಿದ್ದಾರೆ. ತಮಗೆ ಬೈಕ್ ದುರಸ್ತಿಯೂ ಅಲ್ಪಸ್ವಲ್ಪ ಗೊತ್ತಿರುವುದರಿಂದ ಯಾವುದೇ ತೊಂದರೆಯಾಗಿಲ್ಲ. ಅಲ್ಲದೇ ಈಶಾನ್ಯ ಭಾರತದ ಮಂದಿ ನನಗೆ ತಂಗಿಯಂತೆ ತೋರಿದ ಪ್ರೀತಿ ಮರೆಯಲು ಸಾಧ್ಯವಿಲ್ಲ. ಅಪಘಾತವಾದ ಕಹಿ ಘಟನೆಯೊಂದು ಬಿಟ್ಟರೆ ಏಕಾಂಗಿಯಾಗಿ ಬೈಕ್ ರೈಡಿಂಗ್ ಮಾಡುವುದು ಒಂದು ರೀತಿ ಚಾಲೆಂಜಿಂಗ್ ಎನಿಸಿತು ಎಂದು ಅಮೃತಾ ಜೋಶಿ ಹೇಳಿದ್ದಾರೆ.
PublicNext
10/08/2022 05:31 pm