ವರದಿ: ರಹೀಂ ಉಜಿರೆ
ಉಡುಪಿ: ಈಕೆ ಒಂಟಿ ವೃದ್ಧೆ. ಹೆಸರು ನರ್ಸಿ ಮೊಗವೀರ. ಕಳೆದ ವರ್ಷ ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿ ಎಂಟು ತಿಂಗಳು ಇನ್ನಿಲ್ಲದ ಯಾತನೆಗೆ ಒಳಗಾದಾಕೆ. ಅದು ಹೇಗೋ ಸಮಾಜಸೇವಕ ವಿಶು ಶೆಟ್ಟಿ ಅವರ ಕಣ್ಣಿಗೆ ಬಿದ್ದಿದ್ದರು. ಬಳಿಕ ಈಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.
ಸುಮಾರು 15 ತಿಂಗಳು ಈಕೆಗೆ ಆರೈಕೆ ನೀಡಿದ ಬಳಿಕ ಇವರು ಗುಣಮುಖರಾಗಿದ್ದಾರೆ. ಈಕೆಗೆ ಆರೈಕೆಯನ್ನೇನೋ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ. ಆದರೆ, ದೂರವಾದ ಸಂಬಂಧಿಕರನ್ನು ನೀಡಲಾಗುತ್ತದೆಯೇ? ಸದ್ಯ ಈ ವೃದ್ಧೆ ಮನೆ ಸೇರಲು ಹಂಬಲಿಸುತ್ತಿದ್ದಾರೆ. ಆದರೆ, ಮನೆಯಲ್ಲಿ ಯಾರೂ ಇಲ್ಲ. ಈಕೆಯನ್ನು ಮತ್ತೆ ಒಂಟಿಯಾಗಿ ಬಿಡಬೇಕೆ? ಇದು ಪ್ರಶ್ನೆ.
ಕೋಟದ ಕಾಜರವಳ್ಳಿ ಈಕೆಯ ಹುಟ್ಟೂರು. ವಿಶು ಶೆಟ್ಟಿಯವರು ಕಾಡಿ- ಬೇಡಿ, ಒಂದು ತಿಂಗಳು ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಿಸಿ ತಜ್ಞ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 3 ತಿಂಗಳ ಕಾಲ ವೃದ್ಧೆಗೆ ವಿಶ್ರಾಂತಿ ನೀಡಬೇಕೆಂದು ವೈದ್ಯರು ತಿಳಿಸಿದ ಕಾರಣ ಸಂಬಂಧಿಕರಾಗಲೀ ಇಲಾಖೆಯಾಗಲಿ ಸಹಕರಿಸದ ಕಾರಣ ವಿಶು ಶೆಟ್ಟಿ ಅಂಬಲಪಾಡಿಯವರ ಮನವಿಗೆ ಸ್ಪಂದಿಸಿ ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ವೈದ್ಯರಾದ ರಾಮಚಂದ್ರ ಭಾರ್ಗವಿ ಐತಾಳ್ ದಂಪತಿ ತಮ್ಮ ಖಾಸಗಿ ವೃದ್ಧಾಶ್ರಮದಲ್ಲಿ ಮೂರು ತಿಂಗಳು ಉಚಿತ ಆಶ್ರಯ ನೀಡಿದ್ದರು. ಇದೀಗ ಮೂರು ತಿಂಗಳು ಕಳೆದು 15 ತಿಂಗಳಾದರೂ ಸಂಬಂಧಿಕರಾಗಲೀ ಇಲಾಖೆಯಾಗಲಿ ಸ್ಪಂದಿಸುತ್ತಿಲ್ಲ. ವೃದ್ಧೆಯು ಕೋಟ ಠಾಣಾ ವ್ಯಾಪ್ತಿಯ ತನ್ನ ಮನೆಗೆ ಹೋಗಲು ಹಂಬಲಿಸುತ್ತಿದ್ದಾರೆ.
ಈಕೆಗೆ ಮನೆ ಇದೆ. ಮನೆಗೆ ಬಿಟ್ಟು ಬಂದರೆ, ಒಂಟಿ ವೃದ್ಧೆಯ ಮುಂದಿನ ಜೀವನ ಹೇಗೆ? ಸಂಬಂಧಪಟ್ಟ ಇಲಾಖೆ ಈಕೆಗೊಂದು ವ್ಯವಸ್ಥೆ ಮಾಡಿಕೊಡಬೇಕಿದೆ.
Kshetra Samachara
17/06/2022 06:34 pm