ವರದಿ: ರಹೀಂ ಉಜಿರೆ
ಕುಂದಾಪುರ: ದೂರದ ಕಾಶ್ಮೀರಕ್ಕೆ ಬೈಕ್‌ನಲ್ಲಿ ಏಕಾಂಗಿಯಾಗಿ ಹೋಗಿ ಬರುವುದು ಎಂದರೆ ಗಂಡಸರೂ ಹತ್ತು ಬಾರಿ ಯೋಚಿಸುತ್ತಾರೆ. ಅಷ್ಟೊಂದು ಸಾಹಸದ ಕೆಲಸ ಅದು. ಅಂಥದರಲ್ಲಿ ಈ ಕಾಲೇಜು ತರುಣಿ ಕೇವಲ 12 ದಿನಗಳಲ್ಲೇ ಈ ಸಾಧನೆ ಮಾಡಿ ಎಲ್ಲರ ಶಹಬ್ಬಾಶ್ ಗಿಟ್ಟಿಸಿಕೊಂಡಿದ್ದಾರೆ!
ಕುಂದಾಪುರ ತಾಲೂಕಿನ ಕುಂಭಾಶಿಯಿಂದ ಜಮ್ಮು-ಕಾಶ್ಮೀರದವರೆಗೆ ಬೈಕ್ ಮೂಲಕ ಏಕಾಂಗಿ ರೈಡ್ ಮಾಡಿ ಇದೀಗ ಸಾಕ್ಷಿ ಹೆಗ್ಡೆ ಊರಿಗೆ ವಾಪಸಾಗಿದ್ದಾರೆ. 7 ಸಾವಿರ ಕಿಲೋಮೀಟರ್ ದೂರವನ್ನು ಕೇವಲ 12 ದಿನಗಳಲ್ಲಿ ಏಕಾಂಗಿಯಾಗಿ ಬೈಕ್‌ನಲ್ಲಿ ಕ್ರಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು ಮೇ 25ರಂದು ಕುಂಭಾಶಿಯ ಮನೆಯಿಂದ ಬೈಕ್‌ನಲ್ಲಿ ಹೊರಟಿದ್ದರು. 15 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿ ಮರಳುವ ಯೋಜನೆ ಹಾಕಿಕೊಂಡಿದ್ದರಾದರೂ ಎರಡು ದಿನ ಮೊದಲೇ ತಮ್ಮ ಪ್ರಯಾಣ ಮುಗಿಸಿ ವಾಪಸ್ ಆಗಿದ್ದಾರೆ. ಮೊದಲ ದಿನ ಕೊಲ್ಲಾಪುರ ತಲುಪಿ ಅಲ್ಲಿ ಒಂದು ದಿನ ಇದ್ದ ನಂತರ ಪನ್ವೇಲ್‌ಗೆ ತೆರಳಿ ಅಲ್ಲಿ ಅಕ್ಕನ ಮನೆಯಲ್ಲಿ ಒಂದು ದಿನ ತಂಗಿ, ನಂತರ ಅಹಮದಾಬಾದ್, ರಾಜಸ್ಥಾನದ ಮೂಲಕ ಜಮ್ಮು-ಕಾಶ್ಮೀರಕ್ಕೆ ತಲುಪಿದ್ದರು. ಶ್ರೀನಗರದಲ್ಲಿ ಒಂದು ದಿನ ತಂಗಿ ಚಂಡೀಗಢಕ್ಕೆ ಹೋಗಿ ಅಲ್ಲಿಂದ ವಾಪಸ್ ಬರುವಾಗ ಮತ್ತೊಂದು ಮಾರ್ಗ ಮೂಲಕ ಮಧ್ಯಪ್ರದೇಶ, ಉತ್ತರಪ್ರದೇಶ, ಲುಧಿಯಾನಗಳಲ್ಲಿ ಸಂಚರಿಸಿ ಮರಳಿದ್ದಾಗಿ ಸಾಕ್ಷಿ ತಿಳಿಸಿದ್ದಾರೆ.
ಹುಡುಗಿಯರು ಎಲ್ಲ ಕಡೆ ಸುರಕ್ಷಿತವಾಗಿದ್ದಾರೆ. ಅವರಿಗೆ ಮನೆಯವರು ಬೆಂಬಲ ಕೊಟ್ಟರೆ ಅವರು ಎಲ್ಲಿ ಬೇಕಾದರೂ ಸುರಕ್ಷಿತವಾಗಿರುತ್ತಾರೆ. ಮಹಿಳೆಯರು ಸಶಕ್ತರು ಎಂಬುದನ್ನು ಸಾಬೀತು ಪಡಿಸಲು ಹಾಗೂ ಆ ಬಗ್ಗೆ ಜಾಗೃತಿ ಮೂಡಿಸಲು ಬೈಕ್‌ನಲ್ಲಿ ಏಕಾಂಗಿ ಪ್ರಯಾಣ ಕೈಗೊಂಡಿದ್ದಾಗಿ ಸಾಕ್ಷಿ ಹೇಳುತ್ತಾರೆ. ಸಾಕ್ಷಿ ಸಾಧನೆಗೆ ಊರವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಹೋಗಿ ಬರುವವರೆಗೂ ಅವರಿಗೆ ಎಲ್ಲಿಯೂ ತೊಂದರೆ ಆಗಿಲ್ಲ ಅನ್ನೋದು ಖುಷಿಯ ವಿಚಾರ. ಈ ಸಾಹಸಿ ಯುವತಿ ಶಿವರಾಮ ಹೆಗಡೆ-ಪುಷ್ಪಾ ದಂಪತಿಯ ಪುತ್ರಿ. ಸದ್ಯ ಕುಂಭಾಶಿಯಲ್ಲಿ ನೆಲೆಸಿದ್ದು, ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.
PublicNext
07/06/2022 01:07 pm