ವಿಟ್ಲ: ಜಾತಿ-ಧರ್ಮದ ಹೆಸರಲ್ಲಿ ಕೀಳಾಗಿ ಕಚ್ಚಾಡ್ತಿರೋ ಇಂದಿನ ಪರಿಸ್ಥಿತಿಯಲ್ಲಿ ವಿಟ್ಲ ಸಮೀಪದ ಬೈರಿಕಟ್ಟೆಯಲ್ಲಿ ಮದುಮಗನೋರ್ವ ಮುಸ್ಲಿಂ ಬಾಂಧವರಿಗೆ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಪ್ರಜ್ಞಾವಂತರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹಿಜಾಬ್, ಹಲಾಲ್ ಕಟ್-ಜಟ್ಕಾ ಕಟ್, ಆಝಾನ್ ದಂಗಲ್, ವ್ಯಾಪಾರ ಬಹಿಷ್ಕಾರದಂಥಾ ಕ್ಷಣಕ್ಕೊಂದು ರಂಪಾಟ ನಡೆಯುತ್ತಿದೆ. ಇದೆಲ್ಲವನ್ನೂ ನೋಡಿ ಅದೆಷ್ಟೋ ಪ್ರಜ್ಞಾವಂತರು ಇದೇನಪ್ಪಾ ನಮ್ಮ ಜೀವನ.? ಎಂಬ ಚಿಂತೆಯಲ್ಲಿದ್ದಾರೆ. ವಿಟ್ಲ ಸಮೀಪದ ಬೈರಿಕಟ್ಟೆ ಎಂಬ ಪುಟ್ಟ ಊರು ಸೌಹಾರ್ದಕ್ಕೆ ಸಾಕ್ಷಿಯಾಗುವ ಮೂಲಕ ಎಲ್ಲಾ ಧರ್ಮಕ್ಕಿಂತಲೂ ಮಾನವ ಧರ್ಮವೇ ಶ್ರೇಷ್ಠವೆಂಬುದನ್ನು ಸಾಬೀತುಪಡಿಸಿದೆ.
ಗೆಳೆಯರ ಬಳಗ ಬೈರಿಕಟ್ಟೆಯ ಸದಸ್ಯರಾದ ಚಂದ್ರಶೇಖರ ಜೆಡ್ಡು ಅವರ ವಿವಾಹ ಸಮಾರಂಭ ಎ.24 ರಂದು ನಡೆಯಿತು. ಮುಸ್ಲಿಂ ಸಮುದಾಯದವರಿಗೆ ರಂಝಾನ್ ತಿಂಗಳು ಆದ ಕಾರಣಕ್ಕಾಗಿ ಮದುವೆಗೆ ಬರಲಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಮದುಮಗ ಚಂದ್ರಶೇಖರ್ ತನ್ನ ಊರಿನ ಎಲ್ಲಾ ಮುಸ್ಲಿಂ ಬಂಧುಗಳಿಗಾಗಿ ಮದುವೆ ಪ್ರಯುಕ್ತ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದರು.
ಇಫ್ತಾರ್ ಕೂಟವನ್ನು ಏರ್ಪಡಿಸಿದ ನವ ವಿವಾಹಿತ ಚಂದ್ರಶೇಖರ್ ಅವರಿಗೆ ಜಲಾಲಿಯಾ ಜುಮ್ಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಕಮಿಟಿ(MIYC)ಯ ಅದ್ಯಕ್ಷರು, ಪದಾಧಿಕಾರಿಗಳು, ಮಸೀದಿಯ ಧರ್ಮಗುರುಗಳ ಮುಖಾಂತರ ಸನ್ಮಾನ ಕೂಡ ಮಾಡಲಾಯಿತು. ಸೌಹಾರ್ಧ ಇಫ್ತಾರ್ ಕೂಟಕ್ಕೆ ಆಗಮಿಸಿದ ಎಲ್ಲರೂ ನವ ದಂಪತಿಗಳ ಮುಂದಿನ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಈ ಘಟನೆಯು ಕೋಮುಸಾಮಾರಸ್ಯಕ್ಕೊಂದು ಮಾದರಿಯಾಗಿದೆ.
PublicNext
26/04/2022 04:39 pm