ʼಪಬ್ಲಿಕ್ ನೆಕ್ಸ್ಟ್ʼ ಮಹಿಳಾ ವಿಶೇಷ
ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಹೆಣ್ಣು ಎಲ್ಲ ಕ್ಷೇತ್ರಕ್ಕೂ ಸೈ ಎಂಬ ಮಾತು ಈಗ ಹಳತಾಯಿತು ಅಲ್ವೇ? ಪುರುಷರೂ ಮಾಡಲು ಹಿಂಜರಿಯುವ ಕೆಲಸವನ್ನು ಮಹಿಳೆ ಧೈರ್ಯ, ಜಾಣ್ಮೆಯಿಂದ ನಿಬಾಯಿಸಬಲ್ಲಳು. ಇದಕ್ಕೆ ತಾಜಾ ಉದಾಹರಣೆ ಉಡುಪಿಯ ವನಜಾ ಪೂಜಾರ್ತಿ.
ಈಕೆಯ ಕಾಯಕ ಅಂತಿಂಥದ್ದಲ್ಲ, ಉಡುಪಿಯ ರುದ್ರಭೂಮಿಯಲ್ಲಿ ಹೆಣ ಸುಡುವ ಮೂಲಕ ಮನುಷ್ಯನ ಕೊನೆ ಪಯಣಕ್ಕೆ ʼಮುಕ್ತಿʼ ಕೊಡುತ್ತಿದ್ದಾರೆ. ಮೂರೂವರೆ ದಶಕಗಳಿಂದ ಇವರು ಮುಕ್ತಿ ನೀಡಿದ ಹೆಣಗಳ ಸಂಖ್ಯೆ ಸಾವಿರಾರು!
ಇಂತಹ ವನಜಕ್ಕನ ಬದುಕೇ ಒಂದು ಕೌತುಕ. 35 ವರ್ಷಗಳ ಹಿಂದೆ ಈಕೆ ಅಕಸ್ಮಿಕವಾಗಿ ತನ್ನ ಗಂಡನಿಗೆ ನೆರವಾಗಲೆಂದು ಸ್ಮಶಾನದಲ್ಲಿ ಹೆಣ ಸುಡುವ ಪ್ರಸಂಗ ಬಂದಿತಂತೆ. ಆಮೇಲೆ ಈಕೆ ಇದೇ ಕಾಯಕ ಮುಂದುವರಿಸಿ, ತನ್ನ ಮೂವರು ಮಕ್ಕಳನ್ನು ಸಾಕಿ ಸಲಹಿದ್ದಾರೆ.
ಮಹಿಳೆಯರಿಗೆ ಸ್ಮಶಾನದ ಒಳಗೆ ಹೋಗಲು ಅವಕಾಶವಿಲ್ಲ ಎನ್ನುವ ಕಾಲಘಟ್ಟದಲ್ಲಿ ಪತಿಗೆ ಬೆಂಗಾವಲಾಗಿ ಸ್ಮಶಾನ ನಿರ್ವಹಣೆ ಕಾರ್ಯದಲ್ಲಿ ತೊಡಗಿಸಿಕೊಂಡರು. ಅದಕ್ಕೂ ಮುನ್ನ ಮಾವಿನಮಿಡಿ ಮಾರಿ ಜೀವನ ಸಾಗಿಸುತ್ತಿದ್ದರಂತೆ. ಅಂದಹಾಗೆ ಈಕೆ ಶಾಲೆ ಮೆಟ್ಟಿಲೇ ಹತ್ತಿಲ್ಲ. ಇದುವರೆಗೆ 30 ಸಾವಿರಕ್ಕಿಂತಲೂ ಅಧಿಕ ಶವಗಳನ್ನು ಚಿತೆಗೆ ಏರಿಸಿದ್ದಾರೆ.
ಅಂದು ಒಂದು ದಿನದ ಮಟ್ಟಿಗೆ ಮಾತ್ರ ಹೆಣ ಸುಡಲು ಮುಂದಾಗಿದ್ದ ವನಜಕ್ಕ, ಅದೇ ಕಾಯಕವನ್ನು ಹೊಟ್ಟೆ ಪಾಡಿಗಾಗಿ ಆಯ್ದುಕೊಂಡು ಮೂರೂವರೆ ದಶಕ ಕಳೆದದ್ದು ಅಚ್ಚರಿಯೇ ಸರಿ! ಇವರನ್ನು ನಾನಾ ಸಂಘ-ಸಂಸ್ಥೆಗಳು 150ಕ್ಕೂ ಹೆಚ್ಚು ಬಾರಿ ಸನ್ಮಾನಿಸಿವೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭ ʼಪಬ್ಲಿಕ್ ನೆಕ್ಸ್ಟ್ʼ ಹೆಮ್ಮೆಯಿಂದ ವಿಶೇಷ ಕಾಯಕಯೋಗಿ ಮಹಿಳೆಯನ್ನು ಗುರುತಿಸಿ, ನಾಡಿಗೆ ಪರಿಚಯಿಸಲು ಯತ್ನಿಸಿದೆ.
PublicNext
08/03/2022 06:25 pm