ವಿಶೇಷ ವರದಿ : ರಹೀಂ ಉಜಿರೆ
ಸಾಲಿಕೇರಿ: ಆಕೆ ಐದು ಮಕ್ಕಳನ್ನು ಸಾಕಿ ಸಲುಹಿದ ಮಹಾತಾಯಿ, ಹತ್ತಾರು ಜನರಿಗೆ ಅನ್ನ ಹಾಕಿದ ಅನ್ನದಾತೆ. ಅಂಥ ಮಹಾತಾಯಿ ಈಗ ಮುಪ್ಪಿನಲ್ಲಿದ್ದು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾಳೆ . ಅಂದಹಾಗೆ ,ಇದು ಕತೆಯಲ್ಲ ಜೀವನ!
ಸುಮಾರು 45 ವರ್ಷಗಳ ಹಿಂದೆ ಸಾಲಿಕೇರಿಯಲ್ಲಿ ಕೈ ಮಗ್ಗ ಉದ್ಯಮ ನಡೆಸುತ್ತಿದ್ದ, ಪರಮೇಶ್ವರ ಶೆಟ್ಟಿಗಾರರನ್ನು ಮದುವೆ ಆಗಿದ್ದ ಗಿರಿಜಾರದ್ದು ತುಂಬು ಸಂಸಾರ. ಪರಮೇಶ್ವರ ಶೆಟ್ಟಿಗಾರರು ಮೊದಲ ಪತ್ನಿಯ ಸಾವಿನ ನಂತರ ಗಿರಿಜಾ ರನ್ನು ಮದುವೆ ಮಾಡಿಕೊಂಡಿದ್ದರು. ಗಿರಿಜಾರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಪರಮೇಶ್ವರ ಅವರ ಐವರು ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಂಡರು. ಜೊತೆಗೆ ಕೈ ಮಗ್ಗ ಉದ್ಯಮವನ್ನು ನೋಡಿಕೊಳ್ಳತ್ತಿದ್ದರು. ಪರಮೇಶ್ವರ ಶೆಟ್ಟಿಗಾರ ಬದುಕಿದ್ದಾಗ, ಗಿರಿಜಾ ಅವರ ಜೀವಿತಾವಧಿವರೆಗೂ ಮನೆಯಲ್ಲಿ ವಾಸ್ತವ್ಯದ ಹಕ್ಕುನ್ನು ನೀಡಿದ್ದರು. ಆದರೆ 2008ರಲ್ಲಿ ಗಂಡ ಪರಮೇಶ್ವರರ ಸಾವಿನ ಬಳಿಕ ಎರಡನೇ ಮಗ ಮನೆ ಹಾಗೂ ಜಮೀನನ್ನು ಅಡವಿಟ್ಟು, ಸಾಲ ಪಡೆಯುವಾಗ ಗಿರಿಜಾ ಅವರ ಅನುಮತಿ ಕೇಳಲಿಲ್ಲ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ..
ಇನ್ನು, 2008 ರಲ್ಲಿ ಸಾಲ ಮರುಪಾವತಿ ಮಾಡದೇ ಮನೆ ಬ್ಯಾಂಕ್ ಪಾಲಾಯಿತು. ಅನಾಥೆಯಾದ ಈ ತಾಯಿಯನ್ನು ಕೊನೆಗೆ ದೊಡ್ಡ ಮಗ ಬೆಂಗಳೂರಿಗೆ ಕಡೆದುಕೊಂಡು ಹೋದ .ಆದರೆ ಆತನ ಸಾವಾಗಿ ದಿನ ಕಳೆದಾಗ ಮೊಮ್ಮಗ ಅಜ್ಜಿಯನ್ನು ಕರೆತಂದು ಸಾಲಿಕೇರಿಯ ನಡುರಸ್ತೆಯಲ್ಲಿ ಬಿಟ್ಟಿದ್ದ. ಹೀಗಾಗಿ ಅನಾಥೆಯಾದ ತಾಯಿ ಈಗ ಊರ ಮಹಿಳೆಯೊಬ್ಬರ ಆಶ್ರಯದಲ್ಲಿದ್ದು, ತನಗೆ ನ್ಯಾಯ ಕೊಡಿ ಎಂದು ಮಾನವ ಹಕ್ಕುಗಳ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.
ಒಟ್ಟಿನಲ್ಲಿ ತನ್ನ ಮಕ್ಕಳು, ಮೊಮ್ಮಕ್ಕಳನ್ನು ಸಾಕಿ ಸಲಹಿದ ಮಹಾತಾಯಿ ಈಗ ಬೀದಿಪಾಲಾಗಿದ್ದಾರೆ.ಎಲ್ಲ ಇದ್ದೂ ಈಗ ಏನೂ ಇಲ್ಲದೇ ಇರುವಂತಾಗಿದೆ ಅಜ್ಜಿ ಪರಿಸ್ಥಿತಿ. ಮಾನವ ಹಕ್ಕುಗಳ ಪ್ರತಿಷ್ಠಾನವು ಈ ಅಜ್ಜಿಗೆ ನ್ಯಾಯ ಕೊಡಿಸುವ ಪಣ ತೊಟ್ಟಿದೆ. ಗಿರಿಜಾ ಅವರ ಸಹಿ ಇಲ್ಲದೇ ಬ್ಯಾಂಕ್ ಸಾಲ ನೀಡಿದವರ ವಿರುದ್ಧ ಹಾಗೂ ದೂರವಾದ ಮಕ್ಕಳು ಮೊಮ್ಮಕ್ಕಳು ಉಟ, ಔಷಧಿ ಖರ್ಚು ನೀಡದೇ ಇರುವ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟಕ್ಕೆ ಮುಂದಾಗಿದೆ. ಈ ಮಹಾತಾಯಿಗೆ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ.
PublicNext
05/01/2022 09:14 am