ವಿಶೇಷ ವರದಿ: ರಹೀಂ ಉಜಿರೆ
ಅತ್ರಾಡಿ: ದಶಕಗಳ ಹಿಂದೆ ಕರಾವಳಿಯಲ್ಲಿ ವದಂತಿಯೊಂದು ಹಬ್ಬಿತ್ತು. ʼಕ್ರಿಕೆಟ್ ಮಾಂತ್ರಿಕʼ ಸಚಿನ್ ತೆಂಡೂಲ್ಕರ್ ಪೂರ್ವಿಕರು ಉಡುಪಿ ಭಾಗದಲ್ಲಿ ವಾಸಿಸುತ್ತಿದ್ದರು ಅಂತ. ಈಗ ಅದೇ ಸುದ್ದಿ ಹೊಸ ರೂಪದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ದೂರ-ದೂರವಾದ ಅದೆಷ್ಟೋ ಸಂಬಂಧಗಳು ನಾಗಾರಾಧನೆ ಕಾರಣದಿಂದ ಮತ್ತೆ ಒಂದಾದ ಉದಾಹರಣೆ ಉಡುಪಿಯಲ್ಲಿ ಕಾಣ ಸಿಗುತ್ತವೆ. ಹೀಗೆ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮೂಲ ಉಡುಪಿಯ ಆತ್ರಾಡಿ. ಇವರಿಗೆ ಸಂಬಂಧಿಸಿದ ನಾಗಬನ ಕೂಡ ಇಲ್ಲಿದೆ ಎಂಬ ಸುದ್ದಿ ದೊಡ್ಡದಾಗಿ ಹಬ್ಬುತ್ತಿದೆ! ಅತ್ರಾಡಿಯ ಅಪ್ಪು ಪ್ರಭುಗಳು ಹೇಳುವಂತೆ, ಅವರ ತಂದೆ ವಿಠ್ಠಲ ಪ್ರಭು ಒಟ್ಟು ಐದು ಮಂದಿ ಸಹೋದರರಂತೆ. ಲಕ್ಷ್ಮಣ ಪ್ರಭು, ರಾಮ ಪ್ರಭು, ಕೃಷ್ಣ ಪ್ರಭು, ಅನಂತ ಪ್ರಭು ಎಂಬ ಹೆಸರಿನ ಈ ಸಹೋದರರು, ಇಲ್ಲೇ ಆತ್ರಾಡಿ ಬಳಿ ಹುಟ್ಟಿದವರಂತೆ. ಸದ್ಯ ಪೂರ್ವಿಕರ ಮನೆ ಇಲ್ಲಿ ಇಲ್ಲ. ಈ ಸಹೋದರರ ಪೈಕಿ, ಲಕ್ಷ್ಮಣ ಪ್ರಭು ದೊಡ್ಡವರು. ನಂತರ ರಾಮ ಮತ್ತು ಕೃಷ್ಣ ಎಂಬ ಇಬ್ಬರು ಅವಳಿ ಸಹೋದರರು ಇದ್ದರಂತೆ. ಇವರಲ್ಲಿ ಯಾರೋ ಒಬ್ಬರು ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರಂತೆ. ವಲಸೆ ಹೋದವರ ಮೊಮ್ಮಗನೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅನ್ನೋದು ಅಪ್ಪು ಪ್ರಭುಗಳ ಬಲವಾದ ನಂಬಿಕೆ.
ಇನ್ನು ಪ್ರಭುಗಳು ಅವರಾಗಿಯೇ ಯಾರ ಬಳಿಯೂ ತಾನು ತೆಂಡೂಲ್ಕರ್ ಸಂಬಂಧಿ ಎಂದು ಹೇಳಿಕೊಂಡಿಲ್ಲ. ಹಳೆ ವದಂತಿ ಬಗ್ಗೆ ಯಾರೋ ಬಂದು ವಿಚಾರಿಸಿದಾಗ, ಪ್ರಭುಗಳು ಈ ಕಥೆ ವಿವರಿಸಿದ್ದಾರೆ. ಕೆಲವರ್ಷಗಳ ಹಿಂದೆ ಸಚಿನ್ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು, ಸರ್ಪ ಸಂಸ್ಕಾರ ನಡೆಸಿದ್ದರು. ನಾಗಮೂಲಗಳು ಸಿಗದೇ ಹೋದಾಗ ಕುಕ್ಕೆ ಸುಬ್ರಹ್ಮಣ್ಯ ನೇ ಎಲ್ಲದಕ್ಕೂ ಮೂಲ ಎಂದು ಶರಣಾಗೋದು ಪದ್ಧತಿ. ಸಚಿನ್ ಕುಕ್ಕೆಗೆ ಬಂದಾಗ ಮತ್ತು ಇಲ್ಲಿ ಸರ್ಪ ಸಂಸ್ಕಾರ ನಡೆಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು! ಆಗಲೇ ಸಚಿನ್ ತೆಂಡೂಲ್ಕರ್ ಕೂಡ ಇಲ್ಲಿಂದಲೇ ವಲಸೆ ಹೋದವರಿರಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
PublicNext
30/12/2021 09:10 pm