ಕಾಪು : ಕರಾವಳಿಯಲ್ಲಿ ಹುಟ್ಟಿ, ಬೆಳೆದು ಮುಂಬಯಿಯಲ್ಲಿ ಸಾಧನೆಗೈದ ತಮ್ಮ ತಾಯಿಯ ಜೊತೆಗೆ, ಕುಟುಂಬದ ಹಿರಿಯರ ನೆನಪಿನಲ್ಲಿ ಮಂದಿರವೊಂದನ್ನು ನಿರ್ಮಿಸಿ, ಅದರಲ್ಲಿ ತಾಯಿಯ ಜೊತೆಗೆ, ಅಜ್ಜಿ ಮತ್ತು ಮುತ್ತಜ್ಜಿಯ ಶಿಲಾ ಮೂರ್ತಿಯನ್ನೂ ಪ್ರತಿಷ್ಟಾಪಿಸುವ ಮೂಲಕ ಮುಂಬಯಿಯಲ್ಲೇ ಮುಟ್ಟಿ ಬೆಳೆದ ಮಕ್ಕಳು ಕರಾವಳಿಯಲ್ಲೇ ಅಪರೂಪವೆಂಬತಂಹ ಸೇವಾ ಕಾರ್ಯವನ್ನು ನಡೆಸಿ, ಮಾದರಿಯಾಗಿದ್ದಾರೆ. ಕಾಪು ಗರಡಿ ರಸ್ತೆಯ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೊಡಿಯ ಗರಡಿ ಮನೆಯ,ಸದಸ್ಯರಾದ ಗೀತಾ ಯಾದವ್ ಪೂಜಾರಿ ಅವರ ತಾಯಿ ಕಲ್ಯಾಣಿ ಬಾಯಿ ಪೂಜಾರಿ , ಮುತ್ತಜ್ಜಿ ಮುತ್ತಕ್ಕ ಬೈದಿ ಪೂಜಾರ್‍ತಿ, ಅವರ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿಸಿದ್ದಾರೆ.
ಗೀತಾ ಯಾದವ್ ಪೂಜಾರಿ ಅವರು, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ, ರಾಜಕೀಯದ ಜೊತೆಗೆ ವಿವಿಧ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವಾ ಕಾರ್ಯಗಳಲ್ಲೂ ಮುಂಚೂಣಿಯಲ್ಲಿ ನಿಂತು ವಿವಿಧ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕಾಪು ಪರಿಸರದಲ್ಲಿಯೂ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕಳೆದ ವರ್ಷ ಹೃದಯಾಘಾತದಿಂದಾಗಿ ನಿಧನ ಹೊಂದಿದ್ದರು.
ಮಂದಿರ ನಿರ್ಮಾಣಕ್ಕೆ ಪಿಂಕ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದ್ದು, ಮೂರ್ತಿ ಕೆತ್ತನೆಗೆ ವೈಟ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದೆ. ಮೂರ್ತಿ ಪ್ರತಿಷ್ಟಾಪನೆ ಸಹಿತವಾದ ಜೋಡಣಾ ಕಾರ್ಯಗಳಿಗೆ 27 ಲಕ್ಷ ರೂ. ಖರ್ಚಾಗಿದೆ. ರಾಜಸ್ಥಾನದ ಜೈಪುರದ ಕಾರ್ಮಿಕರ ತಂಡವು ಗುಡಿ ನಿರ್ಮಾಣ ಮತ್ತು ಮೂರ್ತಿ ಕೆತ್ತನಾ ಕಾರ್ಯಗಳ ಕಾಮಗಾರಿ ಮಾಡಿದ್ದಾರೆ.
ಮಾಜಿ ಕಾರ್ಪೋರೇಟರ್ ಗೀತಾ ಯಾದವ್ ಪೂಜಾರಿ ಅವರ ನೆನಪಿನಲ್ಲಿ ಪತಿ ವಸಂತ್ ಯಾದವ್, ಮಕ್ಕಳಾದ ಮನೋಜ್ ವಿ. ಯಾದವ್, ಸಂತೋಷ್ ವಿ. ಯಾದವ್, ವಿನಯ್ ವಿ. ಯಾದವ್ ಮತ್ತು ನವದುರ್ಗಾ ಲಕ್ಷೀ ಅವರು ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯ ಪುತ್ಥಳಿಯನ್ನು ನಿರ್ಮಿಸಿ, ಮಂದಿರದೊಳಗೆ ಪ್ರತಿಷ್ಠಾಪಿಸಿ, ಕುಟುಂಬದ ಮೂರು ತಲೆಮಾರಿನ ಹಿರಿಯರ ನೆನಪನ್ನು ಶಾಶ್ವತವಾಗಿಸುವ ಪ್ರಯತ್ನಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತ ವಾಗಿದೆ.
Kshetra Samachara
05/09/2021 01:32 pm