ಉಡುಪಿ: ಮತ್ತೊಂದು ಶ್ರೀಕೃಷ್ಣಜನ್ಮಾಷ್ಠಮಿ ಬಂದಿದೆ.ಅಷ್ಠಮಿಗೆ ಥರಹೇವಾರಿ ವೇಷ ಹಾಕಿ ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸುವ ರವಿ ಕಟಪಾಡಿ ಈ ಬಾರಿಯೂ ಮಕ್ಕಳ ದೇಣಿಗೆಗಾಗಿ ವೇಷ ತೊಡಲಿದ್ದಾರೆ.ಆರು ವರ್ಷಗಳಲ್ಲಿ 72 ಲಕ್ಷ ರೂ ಸಂಗ್ರಹ ಮಾಡಿ ಮಕ್ಕಳ ಚಿಕಿತ್ಸೆಗೆ ವ್ಯಯಿಸಿದ ಅಪರೂಪದ ವ್ತಕ್ತಿ ರವಿ ಕಟಪಾಡಿ!
ತನ್ನ ವಿಶಿಷ್ಟ ಸಮಾಜಸೇವೆಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವವರು ರವಿ ಕಟಪಾಡಿ.ಅಷ್ಠಮಿ ಸಂದರ್ಭ ಇವರು ವಿಶಿಷ್ಟ ವೇಷಗಳ ಮೂಲಕ ಗಮನ ಸೆಳೆಯುತ್ತಾರೆ.ಹಾಗಂತ ರವಿ ಸುಮ್ಮನೆ ವೇಷಗಳನ್ನು ಹಾಕುವುದಿಲ್ಲ. ಅತ್ಯಂತ ವಿಶಿಷ್ಟವಾಗಿ ಕಾಣುವ ವೇಷಗಳ ಮೂಲಕ ಇವರು ದಾನಿಗಳ ಬಳಿ ತೆರಳುತ್ತಾರೆ. ಅವರಿಂದ ಹಣ ಸಂಗ್ರಹಿಸುತ್ತಾರೆ. ದಿನಗಟ್ಟಲೆ ವೇಷ ಹಾಕಿ ಮನೆಮನೆಗೂ ತೆರಳಿ ಹಣ ಸಂಗ್ರಹ ಮಾಡುತ್ತಾರೆ. ಬಸ್ ನಿಲ್ದಾಣ, ಅಂಗಡಿಗಳಿಗೂ ತೆರಳಿ ಹಣ ಸಂಗ್ರಹಿಸುತ್ತಾರೆ.ಹೀಗೆ ಸಂಗ್ರಹವಾದ ಹಣವನ್ನು ಇವರು ಇಟ್ಟುಕೊಳ್ಳುವುದಿಲ್ಲ,ಮಕ್ಕಳ ಚಿಕಿತ್ಸೆಗೆ ನೀಡುತ್ತಾರೆ!
ನೀವು ನಂಬಲಿಕ್ಕಿಲ್ಲ.ಕಳೆದ ಆರು ವರ್ಷಗಳಲ್ಲಿ ರವಿ ಕಟಪಾಡಿ ಸುಮಾರು 72 ಲಕ್ಷ ರೂ ಹಣ ಸಂಗ್ರಹಿಸಿದ್ದಾರೆ.ಈ ಹಣವನ್ನು ಅವರು ಕ್ಯಾನ್ಸರ್ ಮತ್ತಿತರ ಮಾರಕ ರೋಗಗಳಿಗೆ ತುತ್ತಾದ ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ.ಈ ವರ್ಷವೂ ನಾಲ್ವರು ಮಕ್ಕಳ ಚಿಕಿತ್ಸೆಗಾಗಿ ವೇಷ ತೊಡುತ್ತಿದ್ದಾರೆ.
ಕೌನ್ ಬನೇಗಾ ಕರೊಡ್ ಪತಿಯು ಸಮಾಜ ಸೇವಾ ವಿಭಾಗದ ಸಾಧಕರಿಗಾಗಿ ನಡೆಸಲಾಗುವ 'ಕರಮ್ ವೀರ್' ವಿಭಾಗಕ್ಕೆ ರವಿ ಕಟಪಾಡಿ ಆಯ್ಕೆಯಾಗಿದ್ದರು.ರವಿ ಈ ಸ್ಪರ್ಧೆಯಲ್ಲಿ 12.5 ಲಕ್ಷ ರೂ. ಗೆದ್ದಿದ್ದರು.ಈ ಹಣವನ್ನೂ ಇಟ್ಟು ಕೊಳ್ಳದೆ ಅನಾರೋಗ್ಯ ಪೀಡಿತ ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಿದ ಅಪರೂಪದ ,ಮೌನ ಸಾಧಕ ಈತ.ಇಂತಹ ಸಮಾಜಸೇವಕರ ಸಂಖ್ಯೆ ಸಾವಿರವಾಗಲಿ.
Kshetra Samachara
28/08/2021 02:51 pm