ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ನಾನಾ ವಿಧಾನ ಅಳವಡಿಸಿ ಯಾಂತ್ರೀಕೃತ ಬೋಟ್ ಗಳ ಮೂಲಕ ಸಮುದ್ರ ಮೀನುಗಾರಿಕೆ ನಡೆಯುತ್ತದೆ. ಅವುಗಳೆಂದರೆ ಆಳಕಡಲ( ಡೀಪ್ ಸೀ) ಮೀನುಗಾರಿಕೆ, ಪರ್ಸೀನ್ ಬೋಟ್ ಮೀನುಗಾರಿಕೆ, ಚಿಕ್ಕ ಟ್ರಾಲ್ ಬೋಟ್, ಗಿಲ್ ನೆಟ್ ಹಾಗೂ ಬೇಪು ಅಂದ್ರೆ ಗಾಳದ ಮೀನುಗಾರಿಕೆ ಪ್ರಮುಖವಾದವು.
ಈ ವೀಡಿಯೊದಲ್ಲಿ ಪರ್ಸೀನ್ ಬೋಟೊಂದು ಮೀನು ಬೇಟೆಯಲ್ಲಿ ತೊಡಗಿರುವ ಚಿತ್ರಣ ಸೆರೆಯಾಗಿದೆ. ಪರ್ಸೀನ್ ಮತ್ಸ್ಯಗಾರಿಕೆಯಲ್ಲಿ ಬಲೆ ದೊಡ್ಡ ಪ್ರಮಾಣದಲ್ಲಿರುತ್ತವೆ, ದುಡಿಯುವ ಮೀನುಗಾರರೂ ಗರಿಷ್ಠ ಮೂವತ್ತರಷ್ಟು.
ನೀರಿನ ಒಳ ಮೇಲ್ಮೈ ನಲ್ಲಿ ಗುಂಪು ಗುಂಪಾಗಿ ಸಂಚರಿಸುವ ಸಿಗಡಿ, ಬಂಗುಡೆ, ಬೂತಾಯಿ, ಯರಬಯಿ, ಮಾಂಜಿ, ಮಣಂಗ್, ಕೊಲತ್ತಾರು, ತಿದ್ಂಬ, ಬೊಲೆಂಜಿರ್ ಇತ್ಯಾದಿ ಪರ್ಸೀನ್ ಬಲೆಯ ಮುಖ್ಯ ಶಿಕಾರಿ.
ಅಗಾಧ ಜಲರಾಶಿ ಮಧ್ಯೆ ಈ ಮತ್ಸ್ಯ ಸಮೂಹ ಕಣ್ಣಿಗೆ ಬಿದ್ದೊಡನೆಯೇ ಪರ್ಸೀನ್ ಆ ಜಾಗಕ್ಕೆ ಧಾವಿಸಿ, ಮೀನು ತಪ್ಪಿಸಿಕೊಂಡು ಹೋಗದಂತೆ ವೃತ್ತಾಕಾರದಲ್ಲಿ ಬಲೆ ಹರಡುತ್ತದೆ. ಈ ಸಂದರ್ಭ ಅತೀ ವೇಗವಾಗಿ, ಅಷ್ಟೇ ಎಚ್ಚರಿಕೆಯಿಂದ ಬೋಟನ್ನು ಚಲಾಯಿಸಬೇಕಾಗುತ್ತದೆ.
ಕೆಲವೊಮ್ಮೆ ಬಲೆಗೆ ಬಿದ್ದ ಮೀನಿನ ಗುಂಪು ಅಚಾನಕ್ ಕಡಲ ತಳಭಾಗದತ್ತ ಚಲಿಸಿದರೆ ಬಲೆ ಖಾಲಿ! ಆಗ ಮೀನುಗಾರರ ಮೊಗದಲ್ಲಿ ನಿರಾಶೆ ಛಾಯೆ... 'ಕೈಗೆ ಬಂದ ತುತ್ತು...ಬಾಯಿಗಿಲ್ಲ' ಎಂಬಂತೆ ಬರಿಗೈಲಿ ವಾಪಸ್. ಆದರೂ 'ನಾಳೆ' ಉತ್ತಮ ಸಂಪಾದನೆಯ ನಿರೀಕ್ಷೆ, ಕನಸು...
- ಮನೋಜ್ ಕೆ.ಬೆಂಗ್ರೆ, ಪಬ್ಲಿಕ್ ನೆಕ್ಸ್ಟ್
Kshetra Samachara
10/08/2021 10:14 am