ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದು ಅಂತ್ಯಸಂಸ್ಕಾರ ನೆರವೇರಿಸಿ, ಉತ್ತರ ಕ್ರಿಯೆ ಸಿದ್ಧತೆ ನಡೆಸಿದ್ದ ಕುಟುಂಬಸ್ಥರಿಗೆ ಅಚ್ಚರಿ ಮೂಡಿಸಿದ ಘಟನೆ ಬೆಳ್ತಂಗಡಿಯ ಗರ್ಡಾಡಿ ಗ್ರಾಮದಲ್ಲಿ ನಡೆದಿದೆ.
ಹೌದು. ಗರ್ಡಾಡಿ ಗ್ರಾಮದ ನಿವಾಸಿ 60 ವರ್ಷ ವಯಸ್ಸಿನ ಶ್ರೀನಿವಾಸ ದೇವಾಡಿಗ ಜ.26 ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅವರ ಮಕ್ಕಳು ನಾಪತ್ತೆ ದೂರು ಸಲ್ಲಿಸಿದ್ದರು. ಒಂದು ವಾರದ ಬಳಿಕ ಕಳೆದ ಫೆಬ್ರವರಿ 3ರಂದು ಓಡಿಲ್ನಾಳ ಗ್ರಾಮದ ಕುಲ್ಲುಂಜ ಕೆರೆಯಲ್ಲಿ ಅಪರಿಚಿತ ಶವವೊಂದು ತೇಲುತ್ತಿರುವುದು ಪತ್ತೆಯಾಗಿತ್ತು. ಇದು ಶ್ರೀನಿವಾಸ ಅವರ ಶವ ಎಂಬ ಸುದ್ದಿ ಹರಡಿತ್ತು.
ಮೃತದೇಹವು ಕೊಳೆತ ಹಿನ್ನೆಲೆಯಲ್ಲಿ ಸರಿಯಾಗಿ ಗುರುತು ಪತ್ತೆ ಹಚ್ಚಲು ಆಗಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಇದೀಗ ಉತ್ತರ ಕ್ರಿಯೆಗೆ ಕೂಡ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಆದರೆ 10 ದಿನಗಳ ಬಳಿಕ ಶ್ರೀನಿವಾಸ ಜೀವಂತವಾಗಿ ಊರಿಗೆ ಮರಳಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಶ್ರೀನಿವಾಸ ಮದ್ಯ ಸೇವನೆ ಚಟಕ್ಕೆ ಬಿದ್ದಿದ್ದರು. ಹೀಗಾಗಿ ಅನೇಕ ಬಾರಿ ಮನೆಯಿಂದ ಹೊರಹೋಗುತ್ತಿದ್ದ ಅವರು ವಾರಗಳ ಕಾಲ ಮನೆಗೆ ಬರದೇ ಎಲ್ಲೆಂದರಲ್ಲಿ ತಿರುಗಾಡುತ್ತಾ, ಸಿಕ್ಕ ಸಿಕ್ಕಲ್ಲಿ ಮಲಗುತ್ತಿದ್ದರು. ಮತ್ತೆ ಯಾವಾಗೋ ಮನೆಗೆ ಮರಳುತ್ತಿದ್ದರು. ಆದರೆ ಈ ಬಾರಿ ಕೆರೆಯಲ್ಲಿ ದೇಹ ಸಿಕ್ಕಾಗ ಮನೆಯವರು ಮತ್ತು ಊರವರೆಲ್ಲರೂ, ಅದೇ ವ್ಯಕ್ತಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಪ್ರಾಣ ಬಿಟ್ಟಿರಬಹುದು ಅಂತ ಶಂಕೆ ವ್ಯಕ್ತಡಿಸಿದ್ದರು.
Kshetra Samachara
17/02/2021 09:00 am