ಉಡುಪಿ: ಯಾತ್ರಾರ್ಥಿಯೊಬ್ಬರು ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಪಡೆದುಕೊಂಡು, ಊರಿಗೆ ಹೊರಡಲೆಂದು ಸರಕಾರಿ ಬಸ್ಸು ನಿಲ್ದಾಣದಲ್ಲಿ ಸಿದ್ಧತೆಯಲ್ಲಿದ್ದಾಗ, ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಯಾತ್ರಾರ್ಥಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರಾದರೂ ಅವರಾಗಲೇ ಮೃತಪಟ್ಟಿದ್ದಾರೆ.
ಪೊಲೀಸರು ಮೃತರ ಬ್ಯಾಗಿನಲ್ಲಿ ದೊರೆತ ಚೀಟಿಗಳ ಆಧಾರದಿಂದ ಮೃತರ ಸಂಬಂಧಿಕರ ವಿಳಾಸ ಪತ್ತೆಮಾಡಿ ವಿಷಯ ಮುಟ್ಟಿಸಿದ್ದರು. ಮೃತ ಯಾತ್ರಾರ್ಥಿ, ರಮೇಶ್ ರಾವ್ ಟೈಲರ್ (63) ವಿನಾಯಕ ನಗರ, ನಾಯಂಡ ಹಳ್ಳಿ, ಬೆಂಗಳೂರಿನ ನಿವಾಸಿಯೆಂದು ತಿಳಿದುಬಂತು.
ಉಡುಪಿಗೆ ಆಗಮಿಸಿರುವ ಮೃತನ ಕುಟುಂಬಿಕರಿಗೆ ಶವಸಂಸ್ಕಾರ ನಡೆಸಲು ಅಸಹಾಯಕ ಪರಿಸ್ಥಿತಿ ಎದುರಾಯಿತು. ನಗರ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರು, ನೀಡಿರುವ ಸಲಹೆಯಂತೆ ಕುಟುಂಬಿಕರು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರನ್ನು ಸಂಪರ್ಕಿಸಿ, ಅಸಹಾಯಕತೆಯನ್ನು ಹೇಳಿಕೊಂಡಿದ್ದರು.
ತಕ್ಷಣ ನೆರವಿಗೆ ಬಂದ ಸಮಾಜಸೇವಕರು ಶವ ಪರೀಕ್ಷೆ ಕಾನೂನು ಪ್ರಕ್ರಿಯೆ ನಡೆದ ಬಳಿಕ ಉದ್ಯಾವರ ಹಿಂದು ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರವನ್ನು ನಡೆಸಿಕೊಟ್ಟಿದ್ದಾರೆ.
Kshetra Samachara
09/02/2021 03:39 pm