ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಈಜು!; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಗಂಗಾಧರ್

ಉಡುಪಿ: ಉಡುಪಿಯ ರಾಷ್ಟ್ರಪ್ರಶಸ್ತಿ ವಿಜೇತ ಈಜುಪಟು ಗಂಗಾಧರ ಜಿ. ಅವರು ಇಂದು ಹೊಸ ದಾಖಲೆ ಬರೆದಿದ್ದಾರೆ.

ಇಂದು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಅರಬ್ಬಿ ಸಮುದ್ರಕ್ಕಿಳಿದ ಅವರು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಕೇವಲ ಒಂದು ಗಂಟೆ 13 ನಿಮಿಷ , 7 ಸೆಕೆಂಡಲ್ಲಿ 1400 ಮೀಟರ್ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದರು.

ಈ ಹಿಂದೆ ಪದ್ಮಾಸನ ಭಂಗಿಯಲ್ಲಿ 800 ಮೀಟರ್ ಈಜಿದ ದಾಖಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿತ್ತು. ಆ ದಾಖಲೆಯನ್ನು ಗಂಗಾಧರ್ ಅಳಿಸಿ ಹಾಕಿದ್ದಾರೆ. ಅಂದ ಹಾಗೆ ಗಂಗಾಧರ್ ಗೆ ಈಗ ಬರೋಬ್ಬರಿ 65 ರ ಹರೆಯ!

ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಅವರು ಈಜುವಾಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳು ಖುದ್ದು ವೀಕ್ಷಿಸಿದರು. ಈಜುವಾಗ ಚಿತ್ರೀಕರಣದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಗಂಗಾಧರ ಜಿ. ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2009ರಿಂದ 2019ರ ವರೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 31 ಚಿನ್ನ, 16 ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ಹೆಗ್ಗಳಿಕೆ ಇವರದು. ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇದರೊಂದಿಗೆ ಗಂಗಾಧರ್ ಸಾಧನೆಯ ಮುಡಿಗೆ ಹೊಸ ಗರಿ ಸೇರಿದಂತಾಗಿದೆ. 65ರ ವಯಸ್ಸಿನಲ್ಲೂ ಪ್ರಾಣಾಪಾಯ ಲೆಕ್ಕಿಸದೆ ತನ್ನನ್ನು ತಾನು ಬಂಧಿಸಿ, ಕಡಲಲ್ಲಿ ನಿರಾಯಾಸವಾಗಿ ಈಜಿದ ಗಂಗಾಧರ್ ಅವರು ಎಲ್ಲ ವಯೋಮಾನದವರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

24/01/2021 01:03 pm

Cinque Terre

22.08 K

Cinque Terre

2

ಸಂಬಂಧಿತ ಸುದ್ದಿ