ಕಟಪಾಡಿ: ಮಹಾಮಳೆಗೆ ತತ್ತರಿಸಿದ ಉಡುಪಿಯ ಚಿತ್ರಣ ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಕಟಪಾಡಿ ಸಮೀಪದ ಮಟ್ಟು ಗ್ರಾಮದಲ್ಲಿ ಅಪರೂಪದ ನೇಕಾರಿಕೆ ಮಾಡುವ ಲಕ್ಷ್ಮಣ ಶೆಟ್ಟಿಗಾರ್ ಎಂಬವರ ಮನೆ ನೆರೆಗೆ ಮುಳುಗಡೆಯಾಗಿತ್ತು.
ತಾಲೂಕಿನಲ್ಲಿ ಇವರೊಬ್ಬರೇ ಈ ಕಸುಬು ಮಾಡುವವರಾಗಿದ್ದು, ಮನೆ ಮತ್ತು ನೇಕಾರಿಕೆ ಯಂತ್ರ ಮುಳುಗಿದ ಚಿತ್ರ ವೈರಲ್ ಆಗಿವೆ.
ಯಕ್ಷಗಾನಕ್ಕೆ ಬಳಸುವ ಸುಂದರ ಸೀರೆಗಳನ್ನು ನೇಯ್ಗೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕೆಲವೇ ನೇಕಾರರಲ್ಲಿ ಲಕ್ಷ್ಮಣ ಶೆಟ್ಟಿಗಾರ್ ಮತ್ತವರ ಪತ್ನಿ ಕೂಡ ಸೇರಿದ್ದಾರೆ.
ಮೊನ್ನೆಯ ಭಾರಿ ಮಳೆಗೆ ಅವರ ಯಂತ್ರ ಹಾಳಾಗುವ ಸ್ಥಿತಿಯಲ್ಲಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಂದ ಸುದ್ದಿ ನೋಡಿ ಹಲವರು ಸಹಾಯಹಸ್ತ ಚಾಚುತ್ತಿದ್ದಾರೆ.
ಯುವಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್, ಜಿಲ್ಲಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಅವರಿಗೆ ಕರೆ ಮಾಡಿ ತಿಳಿಸಿದ್ದು, ತಕ್ಷಣ ಸ್ಪಂದಿಸಿದ ಬಿಜೆಪಿ ಉಡುಪಿ ಜಿಲ್ಲಾ ಯುವಮೋರ್ಚಾ ತಂಡ ಲಕ್ಷ್ಮಣ ಶೆಟ್ಟಿಗಾರರ ಮನೆಗೆ ಭೇಟಿ ನೀಡಿ, ಆರ್ಥಿಕ ನೆರವು ನೀಡಿದ್ದಾರೆ.
ಸ್ವತ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ನೇಕಾರ ಲಕ್ಷ್ಮಣ ರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿ ಮಮ್ಮಲ ಮರುಗಿದ್ದರು. ಮಾತ್ರವಲ್ಲ, ಅಧಿಕಾರಿಗಳನ್ನು ಸಂಪರ್ಕಿಸಿ ಸ್ಥಳಕ್ಕೆ ತೆರಳಲು ಸೂಚಿಸಿದ್ದರು.
Kshetra Samachara
22/09/2020 04:00 pm