ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ನಕ್ಸಲ್ ನಿಗ್ರಹ ಸಿಬ್ಬಂದಿ ಮಾನವೀಯತೆ- ಬಂದೂಕು ಹಿಡಿದ ಕೈಗಳಿಂದ ಒಂಟಿ ಅಜ್ಜನಿಗೆ ಸೂರು!

ವರದಿ: ರಹೀಂ ಉಜಿರೆ

ಹೆಬ್ರಿ: ಅವರೆಲ್ಲ ಬಂದೂಕು ಹಿಡಿದು ಕಾಡಿನಲ್ಲಿ ನಕ್ಸಲರ ಚಲನವಲನದ ಮೇಲೆ ಕಣ್ಣಿಡುವವರು. ದಟ್ಟ ಕಾಡಲ್ಲೇ ಅವರ ವಾಸ. ಇಂತಹ ಸೇವೆಯಲ್ಲಿರುವ ನಕ್ಸಲ್ ನಿಗ್ರಹ ದಳ ಅರಣ್ಯದೊಳಗೆ ವಾಸಿಸುವ ಒಂಟಿ ಅಜ್ಜನಿಗೆ ಮನೆಯೊಂದನ್ನು ನಿರ್ಮಿಸಿ ಕೊಟ್ಟಿದೆ. ಅದೂ ತಮ್ಮ ಸ್ವಂತ ಹಣದಿಂದ.

ಜಿಲ್ಲೆಯ ಹೆಬ್ರಿ ತಾಲೂಕಿನ ಕಾಡಂಚಿನಲ್ಲಿ ದಶಕಗಳಿಂದ ಟರ್ಪಾಲಿನ ಕೊಟ್ಟಿಗೆಯಲ್ಲಿ ನಾರಾಯಣ ಗೌಡ (73) ವಾಸವಿದ್ದರು. ಇವರು ನಾಟಿ ವೈದ್ಯರೂ ಕೂಡ. ಉಡುಪಿ ಜಿಲ್ಲೆಯ ಹೆಬ್ರಿ ಎ.ಎನ್.ಎಫ್ ಕ್ಯಾಂಪಿನ ಎ.ಎನ್.ಎಫ್ ಸಿಬ್ಬಂದಿಗೆ ಈ ಅಜ್ಜ ಚಿರಪರಿಚಿತ. ಕೂಂಬಿಂಗ್ ಸಮಯದಲ್ಲಿ ಅಜ್ಜನಿಗೆ ದಿನಸಿ ಸಾಮಗ್ರಿ ಮತ್ತಿತರ ವಸ್ತುಗಳನ್ನು ಎಎನ್‌ಎಫ್ ಸಿಬ್ಬಂದಿ ಬಹಳ ವರ್ಷಗಳಿಂದ ಪೂರೈಸುತ್ತಿದ್ದರು. ಈ ಬಾರಿ ಅಜ್ಜನ ಕೊಟ್ಟಿಗೆಯಂತಹ ಮನೆ ನೋಡಿ ಮಿಡಿದ ಎಎನ್ ಎಫ್ ಸಿಬ್ಬಂದಿ ಅವರಿಗೆ ಸ್ವಂತ ಹಣ ಸಂಗ್ರಹಿಸಿ ಸೂರು ನಿರ್ಮಿಸಿಕೊಟ್ಟಿದೆ.

ತಾಲೂಕಿನ ನಾಡ್ಪಾಲು ಗ್ರಾಮದ ತೆಂಗುಮಾರ್ ಎಂಬುದು ದಟ್ಟ ಕಾನನ. ಇಲ್ಲಿಂದ ಹೆಬ್ರಿ ಪೇಟೆಗೆ 20 ಕಿ.ಮೀ ದೂರ ಇದೆ. ಹೀಗಾಗಿ ಈ ಅಜ್ಜನಿಗೆ ಸೂರು ನಿರ್ಮಿಸಿಕೊಡುವ ಸಂಕಲ್ಪ ಮಾಡಿದ 27 ಎ.ಎನ್.ಎಫ್ ಸಿಬ್ಬಂದಿ, ಪೋಲಿಸ್ ಇನ್ಸ್ ಪೆಕ್ಟರ್ ಸತೀಶ್ ಹಾಗೂ ಎಸ್‌ಪಿ ಪ್ರಶಾಂತ್ ನಿಕ್ಕಂ ಅವರ ಮಾರ್ಗದರ್ಶನದಲ್ಲಿ ಈ ಮಾನವೀಯ ಕಾರ್ಯ ಮಾಡಿದೆ. ಇದಕ್ಕಾಗಿ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಕಲ್ಲು, ಸಿಮೆಂಟ್, ತಗಡು ಶೀಟ್‌ ಅನ್ನು ಸ್ವತಃ ಕಾಡಿಗೆ ಹೊತ್ತು ಮನೆ ನಿರ್ಮಿಸಿದ್ದಾರೆ. ನಕ್ಸಲ್ ನಿಗ್ರಹ ದಳದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ.

Edited By : Somashekar
Kshetra Samachara

Kshetra Samachara

12/08/2022 09:26 pm

Cinque Terre

12.15 K

Cinque Terre

2

ಸಂಬಂಧಿತ ಸುದ್ದಿ