ಮಂಗಳೂರು: ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಹೀನಾ ಫಾತಿಮಾ ಸುರಕ್ಷಿತವಾಗಿ ತವರು ತಲುಪಿದ್ದಾರೆ. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಬಂದಿಳಿದ ಹೀನಾ ಫಾತಿಮಾರನ್ನು ಅವರ ಹೆತ್ತವರು ಸ್ವಾಗತಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೀನಾ ಫಾತಿಮಾ, ಉಕ್ರೇನ್ ನಲ್ಲಿ ನಾವು ಭಯಾನಕ ಸ್ಥಿತಿಯನ್ನು ಎದುರು ನೋಡುವಂತಾಯಿತು. ನಮ್ಮ ಕಣ್ಣ ಮುಂದೆಯೇ ಶೆಲ್ ಹಾಗೂ ಬಾಂಬ್ ದಾಳಿಗಳು ನಡೆಯುತ್ತಿದ್ದವು. ಈ ಸಮಯದಲ್ಲಿ ನಾವು ಬಂಕರ್ ನಲ್ಲಿ ಆಶ್ರಯ ಪಡೆದಿದ್ದೆವು. ಉಕ್ರೇನ್ ನಲ್ಲಿ ನಾವು ಅನ್ನ, ನೀರಿಗಾಗಿ ಪರದಾಡಿದ್ದೆವು. ರೈಲಿನಲ್ಲಿ ಪೋಲೆಂಡ್ ತಲುಪುವ ಹೊತ್ತಿಗೆ ಆಗಿರುವ ಬಾಂಬ್ ದಾಳಿ ನೆನಪಿಸಿಕೊಂಡಾಗಲೆಲ್ಲಾ ನಾವು ವಾಪಸ್ ಬದುಕಿ ಬರುತ್ತೇವೆ ಎಂದು ಭಾವಿಸಿಯೇ ಇರಲಿಲ್ಲ ಎಂದು ತಿಳಿಸಿದರು.
ಆದರೆ, ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಪೋಲೆಂಡ್ ಗೆ ಆಗಮಿಸಿದ ಬಳಿಕ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ. ಇದಕ್ಕಾಗಿ ನಾವು ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಉಕ್ರೇನ್ ನಿಂದ ಪೋಲೆಂಡ್ ಗೆ ತೆರಳಿದ್ದ ಹೀನಾ ಫಾತಿಮಾ ನಿನ್ನೆಯಷ್ಟೇ ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಿಂದ ಇಂದು ಮಂಗಳೂರಿಗೆ ವಿಮಾನದ ಮೂಲಕ ತವರಿಗೆ ಆಗಮಿಸಿದ್ದಾರೆ. ಹೀನಾ ಫಾತಿಮಾ ಉಕ್ರೇನ್ ನ ನ್ಯಾಶನಲ್ ಯುನಿವರ್ಸಿಟಿಯ ದ್ವಿತೀಯ ವರುಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಾರೆ.
PublicNext
06/03/2022 05:16 pm