ವಿಶೇಷ ವರದಿ: ರಹೀಂ ಉಜಿರೆ
ಉಡುಪಿ:ಒಂದೂವರೆ ವರ್ಷಗಳ ಕಾಲ ಕೋವಿಡ್ ಮಹಾಮಾರಿ ಎಲ್ಲವನ್ನೂ ಆಹುತಿ ತೆಗೆದುಕೊಂಡಿತು.ಉದ್ಯಮ ,ಉದ್ಯೋಗ ,ಜನರ ಮಾನಸಿಕ ನೆಮ್ಮದಿ ಹೀಗೆ.ಇದರ ಜೊತೆಗೆ ಪುಟ್ಟ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನೂ ಅಹುತಿ ತೆಗೆದುಕೊಂಡಿತು.ನಗರದ ಮಕ್ಕಳೇನೋ ಆನ್ಲೈನ್ ,ಆಫ್ ಲೈನ್ ಎಂದು ಶಾಲೆ ಇಲ್ಲದ ಕೊರತೆ ತುಂಬಿದರು. ಆದರೆ ಕಾಡಂಚಿನ ಮಕ್ಳಳು? ಉಹೂಂ ,ಅವರಿಗೆ ನೆಟ್ಟೂ ಇರಲಿಲ್ಲ ,ಇಂಟರ್ನೆಟ್ಟೂ ಇರಲಿಲ್ಲ.
ಅಂತಹ ಕಾಡಂಚಿನ ಅಡವಿ ಮಕ್ಕಳನ್ನು ಮತ್ತೆ ಶೈಕ್ಷಣಿಕ ಬದುಕಿನತ್ತ ,ಮತ್ತೆ ಜೀವನೋತ್ಸಾಹದ ಚಿಲುಮೆಗಳಾಗಿ ಪರಿವರ್ತಿಸುವುದು ಕಷ್ಟದ ಕೆಲಸ.ಅಂತಹ ಸವಾಲಿನ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ ದಿನೇಶ್ ಹೊಳ್ಳ.
"ವನಚೇತನ" ಎಂಬ ಶಿಬಿರಗಳ ಮೂಲಕ ಆದಿವಾಸಿ ಮಕ್ಕಳಿಗೆ ಕಳೆದು ಹೋದ ಪಾಠಗಳನ್ನು ಹೇಳಿಕೊಡುವ ಮೂಲಕ ಅವರಲ್ಲಿ ಮತ್ತೆ ಕೊರೋನಾ ಪೂರ್ವದಲ್ಲಿದ್ದ ಉತ್ಸಾಹ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಹೊಳ್ಳ ಅವರು ಇದಕ್ಕೆ ಆಯ್ದುಕೊಂಡಿದ್ದು ಜೋಯ್ದ, ಯಲ್ಲಾಪುರ, ಅಣಶಿಯಂಥ ಅರಣ್ಯದ ಸೆರಗಿನಲ್ಲಿರುವ ಊರುಗಳನ್ನು.ಅಲ್ಲಿಯ ಶಾಲೆಗಳಿಗೆ ಟೆಲಿವಿಷನ್ ಪರದೆಗಳನ್ನು ಒಯ್ದು ಪಾಠಗಳನ್ನು ಪ್ರದರ್ಶಿಸುವ ಮೂಲಕ,ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳ ಕ್ರಿಯಾತ್ಮಕತೆಯನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ.
ಒಟ್ಟಾರೆ ಗ್ರಾಮೀಣ ಮತ್ತು ,ಕಾಡಂಚಿನ ಶಾಲೆಗಳ ಮಕ್ಕಳ ಮೊಗದಲ್ಲಿ ನಗು ತರಿಸಿ ಕೊರೋನಾ ಕಾರಣದಿಂದ ತಗ್ಗಿದ್ದ ಚುರುಕುತನವನ್ನು ಮತ್ತೆ ಮೂಡಿಸುವ ಯತ್ನ ಮಾಡುತ್ತಿದ್ದಾರೆ.ಇವರ ಈ ಕಾರ್ಯ ನಿಜಕ್ಕೂ ಪ್ರಶಂಸನೀಯ.
Kshetra Samachara
24/12/2021 04:51 pm