ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮುಚ್ಚುವುದರಲ್ಲಿದ್ದ ಸರಕಾರಿ ಶಾಲೆಗೆ ಚೈತನ್ಯ ಸೆಲೆ!; ಹೀಗೊಂದು ದಂಪತಿಯ ಸಾಹಸ ಯಾನ ಚಿತ್ರಣ

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ

ಮಂಗಳೂರು: ಮಕ್ಕಳ ಸಂಖ್ಯೆಯಲ್ಲಿ ಕುಸಿತ ಕಂಡು ಇನ್ನೇನು ಈ ಸರಕಾರಿ ಶಾಲೆ ಮುಚ್ಚುತ್ತದೆ ಎನ್ನುವಾಗಲೇ ಅದೇ ಶಾಲೆ ವಿದ್ಯಾರ್ಥಿಗಳಾದ ಈ ದಂಪತಿಗೆ ವಿಚಾರ ತಿಳಿಯುತ್ತದೆ. ಇಲ್ಲ ನಾವು ಕಲಿತ ಶಾಲೆ ಮುಚ್ಚಬಾರದೆಂದು ಟೊಂಕ ಕಟ್ಟಿ ಶಾಲೆ ಮೇಲ್ದರ್ಜೆಗೇರಿಸಲು ಈ ದಂಪತಿ ಶ್ರಮಿಸಿದರು. ಇದೀಗ ಈ ಶಾಲೆಯಲ್ಲಿ 80ರಷ್ಟಿದ್ದ ಮಕ್ಕಳು 300ಕ್ಕೇರಿದ್ದಾರೆ‌! ಇದಲ್ಲವೇ ಕಲಿತ ಶಾಲೆಗೆ ನೀಡುವ ಬಹುದೊಡ್ಡ ಕೊಡುಗೆ.

ನಾವೀಗ ಹೇಳಲು ಹೊರಟಿರೋದು‌ ನಗರದ ವಾಮಂಜೂರಿನ ತಿರುವೈಲು ದ‌.ಕ. ಜಿಪಂ ಪ್ರಾ‌ಥಮಿಕ ಶಾಲೆ ವಿಚಾರ. ಈ ವರ್ಷಕ್ಕೆ ಬರೋಬ್ಬರಿ 95 ವರ್ಷ ಪೂರೈಸಿರುವ ಈ ಶಾಲೆಯು ಸುತ್ತಮುತ್ತಲಿನ ಆಂಗ್ಲ ಮಾಧ್ಯಮ, ಖಾಸಗಿ ಶಾಲೆಗಳ ಭರಾಟೆಯಿಂದ ನಗಣ್ಯಕ್ಕೊಳಗಾಯಿತು. ಒಂದು ಕಾಲಕ್ಕೆ ಇಡೀ ಶಾಲೆಯಲ್ಲಿ 800 ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 80ಕ್ಕೆ ಕುಸಿಯಿತು‌. ಇದೇ ರೀತಿ ಆದಲ್ಲಿ ಶಾಲೆ ಮುಚ್ಚುವುದು ಖಂಡಿತಾ ಎಂದು ಅರಿತ ಮುಖ್ಯ ಶಿಕ್ಷಕ ಗೋಪಾಲ್ ಹಳೆ ವಿದ್ಯಾರ್ಥಿ ರಘು ಸಾಲ್ಯಾನ್ ಮತ್ತಿತರರನ್ನು ಕರೆದು ಶಾಲೆ ಪರಿಸ್ಥಿತಿ ವಿವರಿಸಿದ್ದಾರೆ‌‌. ಇದನ್ನರಿತ ರಘು ಸಾಲ್ಯಾನ್ - ಹೇಮಲತಾ ದಂಪತಿ ಒಂದಷ್ಟು ಸಮಾನ ಮನಸ್ಕರನ್ನು ಸೇರಿಸಿ ಶಾಲೆಗೆ ಕಾಯಕಲ್ಪ ಒದಗಿಸುವ ಚಿಂತನೆ ನಡೆಸಿದ್ದರು. ಅಂದಹಾಗೆ ಹೇಮಲತಾ ಅದೇ ತಿರುವೈಲ್ ವಾರ್ಡ್ ನಲ್ಲಿ 2ನೇ ಬಾರಿಗೆ ಕಾರ್ಪೊರೇಟರ್ ಆಗಿ ಆಯ್ಕೆಯಾದವರು. ರಘು ಸಾಲ್ಯಾನ್ ಸಿವಿಲ್ ಇಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಮೊದಲಾಗಿ ಇವರು ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಎಲ್ ಕೆಜಿ, ಯುಕೆಜಿ ಆರಂಭಿಸಿದರು. ಈ ತರಗತಿಗೆ ಇಬ್ಬರು ಪ್ರತ್ಯೇಕ ಶಿಕ್ಷಕರನ್ನು ನೇಮಿಸಲಾಯಿತು. ಅವರ ಸಂಬಳ, ನೂತನ ತರಗತಿ ಕಟ್ಟಡ ನಿರ್ಮಾಣಕ್ಕೆ ತಮ್ಮಲ್ಲಿದ್ದ ಹಣವನ್ನೇ ಹಾಕಿದರು. ಸಾಲದ್ದಕ್ಕೆ ಒಂದಷ್ಟು ದೇಣಿಗೆ ಪಡೆದರು. ಅದೇ ರೀತಿ ಮಕ್ಕಳನ್ನು ಸ್ವಂತ ವಾಹನದಲ್ಲಿ ಶಾಲೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಕ್ರಮೇಣ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಒಂದು ಬಸ್ ಖರೀದಿಸಿ ಶಾಲೆಗೆ ದೇಣಿಗೆ ನೀಡಿದರು. ಇದೀಗ ಸ್ಥಳೀಯ ಶಾಸಕ ಡಾ‌.ವೈ.ಭರತ್ ಶೆಟ್ಟಿಯವರಲ್ಲಿ ಮನವಿ ಮಾಡಿ ಶಾಲೆಯನ್ನು ಆಂಗ್ಲ ಮಾಧ್ಯಮದ ದರ್ಜೆಗೇರಿಸಿದ್ದಾರೆ. ಈ ಮೂಲಕ ಈ ವರ್ಷದಿಂದ 1, 2ನೇ ತರಗತಿಯೂ ಆಂಗ್ಲ ಮಾಧ್ಯಮವಾಗಿದೆ. ಸರಕಾರಿ ಶಾಲೆಯತ್ತ ಮಕ್ಕಳನ್ನು ಆಕರ್ಷಿಸಲು ಈ ದಂಪತಿಯ ಸಾಹಸ ನಿಜವಾಗಿಯೂ ಮೆಚ್ಚಲೇ ಬೇಕು. ಈಗಲೂ ಈ ಶಾಲೆ ನಡೆಸಲು ಸಹೃದಯಿ ದಾನಿಗಳ ಅಗತ್ಯವಿದೆ‌. ಖಂಡಿತಾ ದಾನಿಗಳು ಸಹಕರಿಸುವರೆಂಬುದು 'ಪಬ್ಲಿಕ್ ನೆಕ್ಸ್ಟ್' ನ ಕಳಕಳಿ.

Edited By : Manjunath H D
Kshetra Samachara

Kshetra Samachara

25/10/2021 07:13 pm

Cinque Terre

23.19 K

Cinque Terre

5

ಸಂಬಂಧಿತ ಸುದ್ದಿ