ಮಂಗಳೂರು: ಏನಾದರೂ ಸಾಧನೆ ಮಾಡಬೇಕೆಂಬ ಛಲವೊಂದು ಇದ್ದಲ್ಲಿ ವಯಸ್ಸು ಯಾವುದೇ ಕಾರಣಕ್ಕೂ ಅಡ್ಡಿಯಾಗಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಅಟೆಂಡರ್ ಜಯಶ್ರೀ ಅವರು ಸಾಧಿಸಿ ತೋರಿಸಿದ್ದಾರೆ. ಅವರು ತಮ್ಮ 44 ವಯಸ್ಸಿನಲ್ಲಿ ವೃತ್ತಿಯೊಂದಿಗೆ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ನಮ್ಮಿಂದಾಗೋದಿಲ್ಲ ಎಂದು ಕೈಚೆಲ್ಲಿ ಕುಳಿತವರಿಗೆ ಮಾದರಿಯಾಗಿದ್ದಾರೆ.
ನಗರದ ವೆಲೆನ್ಸಿಯಾ ಬಳಿಯ ಸೂಟರ್ ಪೇಟೆಯ ನಿವಾಸಿಯಾಗಿರುವ ಜಯಶ್ರೀಯವರು 5ನೇ ತರಗತಿವರೆಗೆ ಶಾಲೆಗೆ ಹೋಗಿದ್ದರು. ಆದರೆ ಆ ಬಳಿಕ ಅವರಿಗೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಅವರು ನೇರವಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಬರೆದಿದ್ದು, ಖಾಸಗಿ ಟ್ಯೂಷನ್ ಕ್ಲಾಸ್‌ನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರಂತೆ.
ಈ ಬಗ್ಗೆ ಜಯಶ್ರೀವರು ಪ್ರತಿಕ್ರಿಯೆ ನೀಡಿ, ಸಣ್ಣ ವಯಸ್ಸಿನಲ್ಲಿ ಕಲಿಯುವ ಮನಸಿದ್ದರೂ ಈ ಬಗ್ಗೆ ಸಲಹೆ ಸೂಚನೆ, ಪ್ರೇರಣೆ ನೀಡುವವರಿರಲಿಲ್ಲ. ಆದರೆ ಇದೀಗ ಮಂಗಳೂರು ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶೋಭಾ ಮೇಡಂ ಶಿಕ್ಷಣ ಪಡೆಯುವ ದಾರಿ ತೋರಿಸಿದರು. ಈ ಮೂಲಕ ನನಗೆ ನೌಕರಿಯೂ ಖಾಯಂ ಆಗಬಹುದು ಎಂಬ ಉದ್ದೇಶವೂ ಇದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನಾನು ಹೇಳುವುದೊಂದೇ ಅವಕಾಶ ಸಿಕ್ಕಾಗ ಸರಿಯಾಗಿ ಶಿಕ್ಷಣ ಪೂರೈಸಿ. ಕಳೆದು ಹೋದ ಸಮಯ ಮತ್ತೆ ಬಾರದು ಎಂದು ಹೇಳುತ್ತಾರೆ.
Kshetra Samachara
10/08/2021 09:00 am