ಉಡುಪಿ: ಅಮ್ಮನ ಋಣ ಎಲ್ಲಕ್ಕಿಂತ ದೊಡ್ಡದು. ಅದನ್ನು ಯಾವತ್ತೂ ತೀರಿಸಲಾಗದು. ಆದರೆ, ಉಡುಪಿಯ ಕಲಾವಿದರೊಬ್ಬರು ಅಮ್ಮ ಸತ್ತ ನಂತರ ಆಕೆಯ ಋಣ ತೀರಿಸಲು ಪ್ರಯತ್ನಿಸುತ್ತಿದ್ದಾರೆ. ಹೇಗೆ ಅಂತೀರಾ?
ಹಿರಿಯ ಕಲಾವಿರೊಬ್ಬರು ಗತಿಸಿದ ಅಮ್ಮನ ನೆನಪಿಗಾಗಿ ಆಕೆಯ ಮೂರ್ತಿ ನಿರ್ಮಾಣ ಮಾಡಿ, ಗುಡಿ ಕಟ್ಟಿದ್ದಾರೆ. ಮಾತ್ರವಲ್ಲ, ದಿನನಿತ್ಯ ಪೂಜೆ ಯೂ ಮಾಡಿ ಹೆತ್ತಾಕೆಯ ಆಶೀರ್ವಾದ ಪಡೆಯುತ್ತಿದ್ದಾರೆ!
ಇವರು ಬೇರಾರೂ ಅಲ್ಲ. ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಡಾ.ರಾಜಶೇಖರ ಕೋಟ್ಯಾನ್. ತಮ್ಮ ತಾಯಿ ದಿ. ಕಲ್ಯಾಣಿ ಪೂಜಾರ್ತಿ
ಅವರ ನೆನಪಿಗಾಗಿ ಹುಟ್ಟೂರು ಉಡುಪಿಯ ಸಾಂತೂರು ಗರಡಿ ಮನೆಯಲ್ಲಿ ಇವರು ಸುಂದರವಾದ ಗುಡಿ ಕಟ್ಟಿ, ಮೂರ್ತಿ ನಿರ್ಮಿಸಿ ಮಂಗಳಾರತಿ ಬೆಳಗುತ್ತಿದ್ದಾರೆ.
ಏಕಶಿಲಾ ಮೂರ್ತಿಯಲ್ಲಿ ಅಮ್ಮನ ಮೂರ್ತಿಯನ್ನು ಲಕ್ಷಾಂತರ ರೂ. ಖರ್ಚು ಮಾಡಿ ಕೆತ್ತಿಸಿದ್ದಾರೆ.
ತಾಯಿಯ ಪೋಟೊ ಕೊಟ್ಟು ನುರಿತ ಕಲಾವಿದರಿಂದ ಮೂರ್ತಿ ನಿರ್ಮಾಣ ಮಾಡಿಸಿದ್ದಾರೆ. ಮೂರ್ತಿ ನೋಡುವುಕ್ಕೆ ಥೇಟ್ ಅವರ ತಾಯಿಯಂತೆಯೇ ಇದೆ.
ಮೂರ್ತಿ ನೋಡಿದರೆ ತಾಯಿಯನ್ನು ನೋಡಿದಷ್ಟೇ ಖುಷಿ ಆಗುತ್ತೆ ಎನ್ನುತ್ತಾರೆ ರಾಜಶೇಖರ್.
ಅಂದ ಹಾಗೆ, ಇವರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರೂ ಹೌದು. ತಮ್ಮ ಪ್ರೀತಿಯ ತಾಯಿಯನ್ನು ಬದುಕಿದ್ದಾಗಲೂ ಚೆನ್ನಾಗಿ ನೋಡಿಕೊಂಡು, ಗತಿಸಿದ ಮೇಲೂ ಹೆತ್ತವ್ವನ ನೆನಪನ್ನು ಚಿರಸ್ಥಾಯಿಯನ್ನಾಗಿ ಮಾಡಿದ್ದಾರೆ!.
Kshetra Samachara
17/12/2020 01:32 pm